ಶಸ್ತ್ರಚಿಕಿತ್ಸೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ನಟ ಶಿವರಾಜ್ ಕುಮಾರ್
ಬೆಂಗಳೂರು : ಇತ್ತೀಚೆಗೆ ಅಮೆರಿಕದ ಮಿಯಾಮಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಒಳಗಾಗಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ತಮ್ಮ ಶಸ್ತ್ರಚಿಕಿತ್ಸೆ ಬಳಿಕ ಇದೇ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅಮೆರಿಕಕ್ಕೆ ತೆರಳಿದ್ದ ಶಿವರಾಜ್ ಕುಮಾರ್ ಅವರಿಗೆ ಕೆಲವು ದಿನಗಳ ಹಿಂದೆ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಗೀತಾ ಶಿವರಾಜ್ ಕುಮಾರ್ ಮತ್ತು ಮಧು ಬಂಗಾರಪ್ಪ ಹಂಚಿಕೊಂಡಿದ್ದರು. ಇದೀಗ ಹೊಸ ವರ್ಷದಂದು ಸ್ವತಃ ಶಿವರಾಜ್ ಕುಮಾರ್ ಅವರು ವಿಡಿಯೋ ಮಾಡಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮಗಾಗಿ ಪ್ರಾರ್ಥನೆ ಮಾಡಿದ ಎಲ್ಲರಿಗೂ ಧನ್ಯವಾದ ಹೇಳಿದ ಅವರು, ತಮ್ಮ ಆರೋಗ್ಯದ ಬಗ್ಗೆ, ವೈದ್ಯರು ನೀಡಿರುವ ಎಚ್ಚರಿಕೆಗಳ ಬಗ್ಗೆ ಮಾತನಾಡಿದ್ದಾರೆ.
ವಿಡಿಯೋ ಮಾಡಿ ಮಾತನಾಡಿರುವ ಅವರು, “ಎಲ್ಲರಿಗೂ ನಮಸ್ಕಾರ. ಹೊಸ ವರ್ಷದ ಶುಭಾಶಯಗಳು. ಸ್ವಲ್ಪ ಭಯ ಆಗುತ್ತದೆ ಮಾತನಾಡುವಾಗ ಸ್ವಲ್ಪ ಎಮೋಷನಲ್ ಆಗುತ್ತೇನೆ ಅಂಥ. ಹೊರಡುವಾಗ ಸ್ವಲ್ಪ ಭಾವುಕನಾಗಿದ್ದೆ. ಭಯ ಅನ್ನುವಂಥದ್ದು ಮನುಷ್ಯನಿಗೆ ಇದ್ದೇ ಇರುತ್ತದೆ. ಭಯ ನೀಗಿಸಲು ಕೆಲ ಅಭಿಮಾನಿಗಳು ಇದ್ದೇ ಇರುತ್ತಾರೆ. ಕೆಲ ಸಹ ಕಲಾವಿದರು ಇರುತ್ತಾರೆ. ಕೆಲ ಸ್ನೇಹಿತರು ಇರುತ್ತಾರೆ. ಸಂಬಂಧಿಕರು ಇರುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ವೈದ್ಯರು ಇರುತ್ತಾರೆ. ಪ್ರತಿಯೊಬ್ಬರು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ" ಎಂದಿದ್ದಾರೆ.