ಕೆಎಸ್ಸಾರ್ಟಿಸಿಯ ಹೊಸ ಬಸ್ 'ಪಲ್ಲಕ್ಕಿ' ನಾಳೆಯಿಂದ (ಅ. 7) ರಸ್ತೆಗೆ
ಬೆಂಗಳೂರು, ಅ. 6: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಹೊಸ ಬಸ್ ‘ಸಂತೋಷವು ಪ್ರಯಾಣಿಸುತ್ತದೆ’ ಎಂಬ ಟ್ಯಾಗ್ ಲೈನ್‍ನೊಂದಿಗೆ ‘ಪಲ್ಲಕ್ಕಿ’ ನಾಳೆ(ಅ.7)ಯಿಂದ ರಸ್ತೆಗಿಳಿಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಬಸ್‍ಗಳಿಗೆ ಚಾಲನೆ ನೀಡಲಿದ್ದಾರೆ.
ವಿಧಾನಸೌಧದ ಪೂರ್ವದ್ವಾರ ಗ್ರ್ಯಾಂಡ್ ಸ್ಟೆಪ್ಸ್ ಮುಂಭಾಗದಲ್ಲಿ ಬೆಳಗ್ಗೆ 10ಗಂಟೆಗೆ ಸಂಸ್ಥೆ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ 100 ನೂತನ ಕರ್ನಾಟಕ ಸಾರಿಗೆ ಹಾಗೂ 40 ಹವಾ ನಿಯಂತ್ರಣ ರಹಿತ ಸ್ಲೀಪರ್ ಐಷಾರಾಮಿ ‘ಪಲ್ಲಕ್ಕಿ’ ಬಸ್ಸುಗಳ ಉದ್ಘಾಟನೆ ನಡೆಯಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್ ವಹಿಸಲಿದ್ದಾರೆ.
ಅಂಬಾರಿ, ಐರಾವತ, ರಾಜಹಂಸ ಸೇರಿದಂತೆ ಇದೀಗ ಐಷಾರಾಮಿ ‘ಪಲ್ಲಕ್ಕಿ’ ಎಂಬ ಹೊಸ ಬಸ್‍ಗಳು ರಸ್ತೆಗೆ ಇಳಿಯಲು ಸಜ್ಜಾಗಿವೆ. ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿ ಬಳಿಕ ಸಾರಿಗೆ ಬಸ್‍ಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯ ಸರಕಾರ ಹೊಸ ಬಸ್‍ಗಳ ಖರೀದಿಗೆ ಮುಂದಾಗಿದೆ.