ಎಚ್‌ಡಿಕೆ ಆರೋಪ ಸಂಬಂಧ ಮುಖ್ಯ ಕಾರ್ಯದರ್ಶಿಯನ್ನು ಭೇಟಿಯಾಗಿ ವಿವರಣೆ ಕೊಟ್ಟ ಎಡಿಜಿಪಿ ಚಂದ್ರಶೇಖರ್
ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರನ್ನು ಭೇಟಿ ಮಾಡಿ ವಿವರಣೆ ಕೊಟ್ಟಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಚಂದ್ರಶೇಖರ್, ಕುಮಾರಸ್ವಾಮಿ ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಿದ್ದೇನೆ. ನಾನು ಯಾವುದೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ನಾನು ಪತ್ರ ಬರೆದಿದ್ದೇನೆ. ಎಲ್ಲಿ ಧರ್ಮ ಇರುತ್ತದೋ, ಅಲ್ಲಿ ಜಯ ಇರುತ್ತದೆ ಎಂದು ಹೇಳಿದರು.
ದೂರು ನೀಡಿದ್ದ ಜೆಡಿಎಸ್: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ನೇತೃತ್ವದ ಶಾಸಕರ ನಿಯೋಗ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿ, ಕಳಂಕಿತ ಅಧಿಕಾರಿ ಚಂದ್ರಶೇಖರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿತ್ತು.
ಭ್ರಷ್ಟಾಚಾರ, ದುರ್ನಡತೆ, ಸುಲಿಗೆ ಮುಂತಾದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಿ ಉನ್ನತಮಟ್ಟದ ತನಿಖೆ ನಡೆಸಬೇಕು. ಹಿಮಾಚಲ ಪ್ರದೇಶ ಕೇಡರ್ ನ ಅಧಿಕಾರಿಯಾಗಿರುವ ಚಂದ್ರಶೇಖರ್ ಸಬೂಬುಗಳನ್ನು ಹೇಳಿಕೊಂಡು ಕರ್ನಾಟಕದಲ್ಲೇ ಹಲವು ವರ್ಷಗಳಿಂದ ಬಿಡಾರ ಹೂಡಿ ಮಾಡಬಾರದ ಭ್ರಷ್ಟಾಚಾರ ಕಾರ್ಯಗಳನ್ನು ಮಾಡಿದ್ದಾರೆ ಎಂದು ನಿಯೋಗ ಆರೋಪಿಸಿತ್ತು.
ಅಲ್ಲದೇ, ಭೂ ಮಾಫಿಯಾ ಜತೆ ಶಾಮೀಲಾಗಿರುವ ಚಂದ್ರಶೇಖರ್, ಬೆಂಗಳೂರಿನಲ್ಲಿ ಅನೇಕ ಕಡೆ ಭೂ ಮಾಲಕರನ್ನು ಹೆದರಿಸಿ, ಬೆದರಿಸಿ ಹಣ ವಸೂಲಿ ಮಾಡಿದ್ದಾರೆ, ಅಲ್ಲದೆ, ಕೆಲವು ಪ್ರಕರಣಗಳಲ್ಲಿ ದೊಡ್ಡ ದೊಡ್ಡ ಕಟ್ಟಡ ನಿರ್ಮಾಣಗಾರರಿಗೆ ಕಿರುಕುಳ ನೀಡಿದ್ದಾರೆ. ತಮ್ಮ ಕೆಳಹಂತದ ಅಧಿಕಾರಿಗಳನ್ನು ಹಣ ತಂದು ಕೊಡುವಂತೆ ಪೀಡಿಸಿದ್ದು, ಈ ಸಂಬಂಧ ದೂರುಗಳೂ ದಾಖಲಾಗಿವೆ, ಆದರೂ ಇದುವರೆಗೂ ಈ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಇಲ್ಲ ಎಂದು ನಿಯೋಗ ತನ್ನ ದೂರಿನಲ್ಲಿ ಆರೋಪಿಸಿತ್ತು.