ವಿಪಕ್ಷಗಳ ಗದ್ದಲ: ಉಭಯ ಸದನ ಕಲಾಪ ಮುಂದೂಡಿಕೆ
ಬೆಂಗಳೂರು, ಜು.4: ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಕೋರಿ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿದ ಕಾರಣ ಸ್ಪೀಕರ್ ಅವರು ಸದನ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದ್ದಾರೆ.
ಇಂದು ಪೂರ್ವಾಹ್ನ 11ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ. ಖಾದರ್ ಪ್ರಶ್ನೋತ್ತರ ಆರಂಭಿಸಿದರು. ಕಾಂಗ್ರೆಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಪ್ರಶ್ನೆ ಕೇಳಿದರು. ಗೃಹ ಸಚಿವ ಜಿ. ಪರಮೇಶ್ವರ ಅದಕ್ಕೆ ಉತ್ತರ ನೀಡಿದರು.
ತಕ್ಷಣ ಎದ್ದು ನಿಂತ ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ, ಗ್ಯಾರಂಟಿ ಕುರಿತು ಚರ್ಚೆ ಆರಂಭಿಸುವಂತೆ ಒತ್ತಾಯಿಸಿದರಲ್ಲದೆ, ಪ್ರಶ್ನೋತ್ತರ ಬದಿಗೊತ್ತಿ ನಿಲುವಳಿ ಸೂಚನೆಯ ಪ್ರಸ್ತಾವ ಮಂಡಿಸಲು ಅವಕಾಶ ನೀಡುವಂತೆ ಆಗ್ರಹಿಸಿದರು.
ಆದರೆ ಅವರ ಈ ಬೇಡಿಕೆಯನ್ನು ತಿರಸ್ಕರಿಸಿದ ಸ್ಪೀಕರ್, ಪ್ರಶ್ನೋತ್ತರ ಮತ್ತು ಶೂನ್ಯ ವೇಳೆ ಬಳಿಕ ಅವಕಾಶ ನೀಡುವುದಾಗಿ ಹೇಳಿದರು.
ಇದಕ್ಕೆ ಒಪ್ಪದ ವಿಪಕ್ಷ ಬಿಜೆಪಿಯವರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಕೆಲಹೊತ್ತು ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರು 15 ನಿಮಿಷಗಳ ಕಾಲ ಸದನ ಕಲಾಪವನ್ನು ಮುಂದೂಡಿದರು.
ಇದೇವೇಳೆ ವಿಧಾನ ಪರಿಷತ್ ಕಲಾಪದಲ್ಲೂ ವಿಪಕ್ಷ ಗದ್ದಲವೆಬ್ಬಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 1 ಗಂಟೆಯ ವರೆಗೆ ಉಪ ಸಭಾಪತಿ ಮುಂದೂಡಿದ್ದಾರೆ.