ದಿನಾಂಕ ಮುಗಿದ ಬಳಿಕವೂ ವಿದ್ಯಾರ್ಥಿಗೆ ಪ್ರವೇಶ: ಕಾಲೇಜಿಗೆ 5 ಲಕ್ಷ ರೂ.ದಂಡ
ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಶ್ವವಿದ್ಯಾಲಯ ನಿಗದಿಪಡಿಸಿದ್ದ ದಿನಾಂಕ ಮುಗಿದ ನಂತರವೂ ವಿದ್ಯಾರ್ಥಿಗೆ ಪ್ರವೇಶ ಕಲ್ಪಿಸಿದ್ದಕ್ಕಾಗಿ ಮಂಗಳೂರು ಮೂಲದ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜಿಗೆ ಮುಂದಿನ ವರ್ಷ ಒಂದು ಮ್ಯಾನೇಜ್ಮೆಂಟ್ ಕೋಟಾದ ಸೀಟ್ ಅನ್ನು ಸರಕಾರಕ್ಕೆ ಬಿಟ್ಟುಕೊಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ತಮ್ಮ ಪ್ರವೇಶವನ್ನು ಅನುಮೋದಿಸದ ವಿಶ್ವವಿದ್ಯಾಲಯದ ಕ್ರಮ ಪ್ರಶ್ನಿಸಿ ಕಾಲೇಜಿನ ವಿದ್ಯಾರ್ಥಿ ಜೆ.ಕೆ. ಸುನಿಲ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಕಾಲೇಜು 5 ಲಕ್ಷ ರೂ.ಗಳನ್ನು ದಂಡದ ರೂಪದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ಆರ್ಜಿಯುಹೆಚ್ಎಸ್)ಕ್ಕೆ ಕಾಲೇಜು ಪಾವತಿಸಬೇಕು. ಇನ್ನು ಮುಂದೆ ದಿನಾಂಕ ಮುಗಿದ ಬಳಿಕ ಯಾವುದೇ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದುಕೊಡಬೇಕು.
ಪ್ರಕರಣದಲ್ಲಿ ದಾಖಲೆಗಳನ್ನು ಗಮನಿಸಿದರೆ ಕಾಲೇಜು ನೀಡಿದ ಅವಧಿಯ ನಂತರ ವಿದ್ಯಾರ್ಥಿಯನ್ನು ಪ್ರವೇಶ ಮಾಡಿಕೊಂಡಿದೆ. ಆದರೆ ನಂತರ ವಿಶ್ವವಿದ್ಯಾಲಯವನ್ನು ದೂಷಿಸಿದೆ. ಅವಧಿ ಮುಗಿದ ನಂತರ ಕಾಲೇಜು ವಿದ್ಯಾರ್ಥಿ ಪ್ರವೇಶ ಮಾಡಿಕೊಂಡಿರುವುದರಿಂದ ಆ ದಾಖಲೆಗಳನ್ನು ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿಲ್ಲ. ಹೀಗಾಗಿಯೇ, ವಿವಿ ಅವರ ಪ್ರವೇಶವನ್ನು ಅನುಮೋದಿಸಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಕಾಲೇಜು ಪದೇ ಪದೇ ಇದೇ ರೀತಿ ನಡೆದುಕೊಳ್ಳುತ್ತಿದೆ ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ಕಾಲೇಜು ನಿಗದಿತ ಅವಧಿಯ ನಂತರವೂ ಸೀಟುಗಳು ಖಾಲಿ ಇದ್ದರೆ ಅದಕ್ಕೆ ಕೊನೆಕ್ಷಣದಲ್ಲಿ ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಂಡು ಅನುಮೋದನೆಗೆ ಕಳುಹಿಸಿ ಅವಧಿಯೊಳಗೆ ಪ್ರವೇಶ ಪ್ರಕ್ರಿಯೆ ನಡೆಸಲಾಗಿದೆ ಎಂದು ಹೇಳಿದೆ. ಇದು ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಕ್ಕೆ ಸಂಪೂರ್ಣ ತದ್ವಿರುದ್ಧ. ಹೀಗಾಗಿ, ದಂಡ ವಿಧಿಸುತ್ತಿರುವುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿತು.