ವಿಶ್ವದ ಶ್ರೇಷ್ಠ ತಜ್ಞ ಸಿದ್ದರಾಮಯ್ಯರಿಗೇಕೆ ಸಲಹೆಗಾರ: ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯ
ಬೆಂಗಳೂರು: ‘ತಾನು ದಾಖಲೆಯ ಬಜೆಟ್ ಮಂಡಿಸಿದೆ’ ಎನ್ನುವ ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞ ಸಿದ್ದರಾಮಯ್ಯ ತಮಗೆ ಸಲಹೆ ಕೊಡಲು ಮತ್ತೊಬ್ಬ ಆರ್ಥಿಕ ಸಲಹೆಗಾರರನ್ನು ನೇಮಿಸಿಕೊಂಡಿರುವುದು ಹಾಸ್ಯಾಸ್ಪದ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಶನಿವಾರ ಇಲ್ಲಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಲವು ಬಾರಿ ಮಂತ್ರಿಯಾಗಿದ್ದ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ, ಇದು ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಮಾಡಿದ ವರ್ಗಾವಣೆ ದಂಧೆ, ಭ್ರಷ್ಟಾಚಾರದ ಸುಧಾರಣೆಗೆ ಈ ನೇಮಕ ನಡೆದಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಟೀಕಿಸಿದರು.
ಅದೇ ರೀತಿ, ಹಿರಿಯ ಶಾಸಕ ಬಿ.ಆರ್.ಪಾಟೀಲ ಅವರನ್ನೂ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ 2013ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೂ, ಅವರ ಕ್ಷೇತ್ರದಲ್ಲಿ ಸೋಲು ಕಂಡರು. ಇದರ ಹಿಂದೆ ಯಾರ ರಾಜಕೀಯ ತಂತ್ರಗಾರಿಕೆ ಇತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಂತಹ ರಾಜಕೀಯ ತಂತ್ರಗಾರಿಕೆಯ ಮೇಧಾವಿಗೆ ರಾಜಕೀಯ ಸಲಹೆಗಾರರು ಏಕೆ ಬೇಕು? ಎಂದು ಪ್ರಶ್ನಿಸಿದರು.
ಸರಕಾರ ಜನರಿಯಲ್ಲಿ ಉದ್ಯೋಗ ಮೇಳ ಮಾಡುವ ಘೋಷಣೆ ಮಾಡಿದೆ. ರಾಜಕಾರಣಿಗಳು ತಮ್ಮ ಏಳಿಗೆಗಾಗಿ ಉದ್ಯೋಗ ಮೇಳ, ಆರೋಗ್ಯ ಮೇಳ ಮಾಡುತ್ತಾರೆ. ಪ್ರಯೋಜನ ಮಾತ್ರ ಶೂನ್ಯ. ಸರ್ಕಾರ ಇಂತಹ ಮೇಳ ಮಾಡುವ ಮೊದಲು ಸರ್ಕಾರದಲ್ಲೇ ಖಾಲಿ ಇರುವ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.
ಇನ್ನೂ, ಬಿಜೆಪಿ ಅವಧಿಯಲ್ಲಿ ಇದ್ದ ವಿದೇಶಿ ಬಂಡವಾಳ ಹೂಡಿಕೆಗಿಂದ ಈಗ ಅದು 2.5 ಶತಕೋಟಿ ಡಾಲರ್ ಕುಸಿದಿದೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅಮೆರಿಕಕ್ಕೆ ಹೋಗಿ ತಂದ ಬಂಡವಾಳ ಇನ್ನೂ ವಿಮಾನದಲ್ಲೇ ಬರುತ್ತಿದೆ ಎಂದ ಅವರು, ಈ ಬಾರಿಯ ಬಜೆಟ್ ಗಾತ್ರವನ್ನು 3.50 ಲಕ್ಷ ಕೋಟಿಗೆ ಏರಿಸುವ ಮಾತು ಹೇಳುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದ ಬಳಿ ಹಣವಿಲ್ಲ. ಇದೆಲ್ಲದಕ್ಕೂ ಹೊಸ ಸಲಹೆಗಾರರು ನೆರವಾಗಬಹುದು ಎಂದು ಟೀಕಿಸಿದರು.
ಸುರಂಗ ನಿರ್ಮಾಣಕ್ಕಾಗಿ ಕುಸ್ತಿ: ಬೆಂಗಳೂರಿನಲ್ಲಿ ಸುರಂಗ ನಿರ್ಮಾಣ ಮಾಡುವ ಯೋಜನೆಗಾಗಿ ಇಬ್ಬರು ಸಚಿವರ ನಡುವೆ ಕುಸ್ತಿ ಶುರುವಾಗಿದೆ. ಈ ಸುರಂಗ ಯೋಜನೆಗೆ 80ಸಾವಿರ ಕೋಟಿ ರೂ.ವೆಚ್ಚ ಆಗುತ್ತದೆ ಎಂದು ಸರಕಾರ ಹೇಳಿದೆ. ಆದರೆ, ಈ ಯೋಜನೆಯನ್ನು ಯಾವಾಗ ಪೂರ್ಣ ಮಾಡುತ್ತೇವೆ ಎಂದು ಸರಕಾರ ಹೇಳುತ್ತಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಮಿನ್ಸ್ ರಸ್ತೆಯಿಂದ ಹೆಬ್ಬಾಳದವರಿಗೆ ಸುರಂಗ ರಸ್ತೆ ನಿರ್ಮಾಣ ಯೋಜನೆ ರೂಪಿಸಿದ್ದೆ. ಅದಕ್ಕೆ ಅಂತಿಮ ಹಂತದ ಅನುಮೋದನೆಯನ್ನೂ ಕೊಡಲಾಗಿತ್ತು. ಆದರೆ, ಅಷ್ಟರಲ್ಲಿ ನನ್ನ ಸರಕಾರ ಹೋಯಿತು. ಆ ಯೋಜನೆ ಅಲ್ಲಿಗೇ ನಿಂತು ಹೋಯಿತು ಎಂದು ಕುಮಾರಸ್ವಾಮಿ ಹೇಳಿದರು.