ಏರೋ ಇಂಡಿಯಾ ವೈಮಾನಿಕ ಪ್ರದರ್ಶನ: ಸ್ವದೇಶಿ ಲಘು ಯುದ್ಧ ವಿಮಾನಗಳು ಹಾರಾಟ
ತ್ರಿವರ್ಣ ಹೊಗೆ ಹೊರಸೂಸುತ್ತಾ ಹಾರಾಟ ನಡೆಸಿದ ಯುದ್ಧ ಜೆಟ್‍ಗಳು

ಬೆಂಗಳೂರು: ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಏರೋ ಇಂಡಿಯಾ-2025’ ವೈಮಾನಿಕ ಪ್ರದರ್ಶನಕ್ಕೆ ಸೋಮವಾರದಂದು ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ ಅದ್ಧೂರಿ ಚಾಲನೆ ದೊರೆತಿದ್ದು, ಮೊದಲ ದಿನ ಸ್ವದೇಶಿ ಲಘು ಯುದ್ಧ ವಿಮಾನಗಳು ಹಾರಾಟ ನಡೆಸಿ ಜನ ಸಾಮಾನ್ಯರನ್ನು ರೋಮಾಂಚನಗೊಳಿಸಿದವು.
ಯಲಹಂಕ ಏರ್ ಫೋರ್ಸ್ ಸ್ಟೇಷನ್‍ನಲ್ಲಿ ಜೆಟ್‍ಗಳು ತ್ರಿವರ್ಣ ಹೊಗೆ ಹೊರಸೂಸುತ್ತಾ ಹಾರಾಟ ನಡೆಸಿದವು. ಆಕಾಶಗಂಗೆ ತಂಡದಿಂದ ಪ್ಯಾರಾಚೂಟ್‍ಗಳಿಂದ ಸೈನಿಕರು ವಾಯುನೆಲೆಯ ರನ್ ವೇ ಬಳಿ ತ್ರಿವರ್ಣ ಧ್ವಜ ಹೊತ್ತು ಇಳಿದರು. ವೈಮಾನಿಕ ಪ್ರದರ್ಶನದಲ್ಲಿ ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಏಕ-ಎಂಜಿನ್ ಮಲ್ಟಿರೋಲ್ ಫೈಟರ್, ಎಚ್‍ಎಎಲ್‍ನ ತೇಜಸ್ ಅನ್ನು ಪ್ರದರ್ಶಿಸಲಾಗಿದೆ.
ಸುಖೋಯ್ ಎಂಕೆ-35 ಆಕಾಶದಲ್ಲಿ ತ್ರಿಶೂಲ್ ವಿನ್ಯಾಸ ಮೂಡಿಸಿತು. ಭಾರತದ ಸುಧಾರಿತ ಲಘು ಹೆಲಿಕಾಪ್ಟರ್ ಧ್ರುವ್ ಸೇರಿದಂತೆ ವಿವಿಧ ರೀತಿಯ ಹೆಲಿಕಾಪ್ಟರ್ ಗಳನ್ನು ಏರೋ ಇಂಡಿಯಾದಲ್ಲಿ ಪ್ರದರ್ಶಿಸಲಾಗಿದೆ.
ದ್ರೋಣಿಯರ್, ಜಾಗ್ವಾರ್ ಯುದ್ಧ ವಿಮಾನ, ಹಡಗು ಯುದ್ಧ ಹೆಲಿಕಾಪ್ಟರ್, ಜಾಗ್ವಾರ್ ಫಾರ್ಮೇಶನ್, ಸೂರ್ಯಕಿರಣ್, ಎಂಬ್ರಿಯರ್ ಸಂವಹನ ವಿಮಾನ ಸೇರಿದಂತೆ ಹಲವು ವಿಮಾನ, ಹೆಲಿಕಾಪ್ಟರ್‍ಗಳು ಆಗಸದಲ್ಲಿ ಪ್ರದರ್ಶನ ತೋರಿದವು.
ಏರೋ ಇಂಡಿಯಾ 2025ರಲ್ಲಿ ಎಚ್‍ಎಎಲ್ ನವೀಕರಿಸಿದ ಹಿಂದೂಸ್ತಾನ್ ಜೆಟ್ ಟ್ರೈನರ್(ಎಚ್‍ಜೆಟಿ)-36ಅನ್ನು ‘ಯಶಸ್' ಎಂದು ಮರುನಾಮಕರಣ ಮಾಡಲಾಗಿದ್ದು, ಅನಾವರಣಗೊಳಿಸಲಾಯಿತು. ವಿಮಾನವನ್ನು ಅತ್ಯಾಧುನಿಕ ಏವಿಯಾನಿಕ್ಸ್ ಮತ್ತು ಅಲ್ಟ್ರಾ-ಆಧುನಿಕ ಕಾಕ್‍ಪಿಟ್‍ನೊಂದಿಗೆ ನವೀಕರಿಸಲಾಗಿದೆ.
ಏರೋನಾಟಿಕಲ್ ಡಿಸೈನ್ ಏಜೆನ್ಸಿ(ಎಡಿಎ) ವಿನ್ಯಾಸಗೊಳಿಸಿದ ಮತ್ತು ಎಚ್‍ಎಎಲ್ ತಯಾರಿಸಿದ ಲಘು ಯುದ್ಧ ವಿಮಾನ(ನೌಕಾಪಡೆ) ಪ್ರದರ್ಶಿಸಲಾಗಿದೆ. ಎಡಿಎ ವಿನ್ಯಾಸಗೊಳಿಸಿದ ನಾಲ್ಕನೇ ತಲೆಮಾರಿನ ಡೆಕ್-ಬೋರ್ನ್ ಫೈಟರ್ ಮತ್ತು ಭವಿಷ್ಯದ ಟ್ವಿನ್ ಎಂಜಿನ್ ಡೆಕ್-ಬೇಸ್ಡ್ ಫೈಟರ್ ಸ್ಕೇಲ್ಡ್ ಮಾಡೆಲ್ ಅನ್ನು ಇಂಡಿಯಾ ಪೆವಿಲಿಯನ್‍ನಲ್ಲಿ ಪ್ರದರ್ಶಿಸಲಾಗಿದೆ.
ಇಂಡಿಯಾ ಪೆವಿಲಿಯನ್: ನೌಕಾಪಡೆಯ ಸುಧಾರಿತ ಕ್ಷಿಪಣಿಗಳು, ಲಾಜಿಸ್ಟಿಕ್ಸ್ ಕಂಟೈನರ್‍ಗಳು, ಎಂಐಜಿ-29ಕೆ ಕ್ಯಾರಿಯರ್-ಹರಡುವ ವ್ಯವಸ್ಥೆಗಳು ಮತ್ತು ಹಗುರವಾದ ಟಾರ್ಪಿಡೊಗಳು ಸೇರಿದಂತೆ ಡಿಆರ್‍ಡಿಓ ಮತ್ತು ಇತರೆ ಉದ್ಯಮದ ಸಹಯೋಗದೊಂದಿಗೆ ಭಾರತೀಯ ನೌಕಾಪಡೆಯು ಅಭಿವೃದ್ಧಿಪಡಿಸಿದ ಸ್ಥಳೀಯ ರಕ್ಷಣಾ ಯೋಜನೆಗಳನ್ನು ಇಂಡಿಯಾ ಪೆವಿಲಿಯನ್‍ನಲ್ಲಿ ಪ್ರದರ್ಶಿಸಿದೆ.
ಇದಲ್ಲದೆ, ಇಂಡಿಯನ್ ಪೆವಿಲಿಯನ್‍ನಲ್ಲಿ ಏರೋ ಏವಿಯೇಷನ್, ಲ್ಯಾಂಡ್ ಏವಿಯೇಷನ್, ನೇವಲ್ ಏವಿಯೇಷನ್, ಡಿಫೆನ್ಸ್-ಸ್ಪೇಸ್ ಮತ್ತು ಸ್ಥಾಪಿತ ತಂತ್ರಜ್ಞಾನದ ಡೊಮೇನ್‍ಗಳಲ್ಲಿ ಸ್ಥಳೀಯ ಸಾಮಥ್ರ್ಯಗಳನ್ನು ಪ್ರದರ್ಶಿಸುವ ಐದು ವಲಯಗಳನ್ನು ಸ್ಥಾಪಿಸಲಾಗಿದೆ.
ಏರೋ ಇಂಡಿಯಾ 2025 ರಕ್ಷಣಾ ಮತ್ತು ಏರೋಸ್ಪೇಸ್‍ನ ಕಾರ್ಯಕ್ರಮವಾಗಿದ್ದು, ಜಾಗತಿಕ ಉದ್ಯಮದ ನಾಯಕರು, ಸರಕಾರಿ ಅಧಿಕಾರಿಗಳು, ತಂತ್ರಜ್ಞಾನ ತಜ್ಞರು ಮತ್ತು ತಂತ್ರಜ್ಞರನ್ನು ಒಟ್ಟುಗೂಡಿಸಿದೆ. 100ಕ್ಕೂ ಹೆಚ್ಚು ಮೂಲ ಸಲಕರಣೆ ತಯಾರಕರು ಭಾಗವಹಿಸಿದ್ದಾರೆ. ಇದರಲ್ಲಿ 19 ದೇಶಗಳಿಂದ 55 (ಅಮೇರಿಕಾ, ಫ್ರಾನ್ಸ್, ರಷ್ಯಾ, ದಕ್ಷಿಣ ಕೊರಿಯಾ, ಯುಕೆ, ಜಪಾನ್, ಇಸ್ರೇಲ್, ಬ್ರೆಜಿಲ್, ಇತ್ಯಾದಿ) 35 ಭಾರತೀಯ ಕಂಪನಿಗಳು ಭಾಗವಹಿಸಿದ್ದವು.
ಏರೋ ಇಂಡಿಯಾ ದ್ವೈವಾರ್ಷಿಕ ಕಾರ್ಯಕ್ರಮವಾಗಿದ್ದು, ಇದನ್ನು ಮೊದಲು 1996ರಲ್ಲಿ ಬೆಂಗಳೂರಿನ ಯಲಹಂಕ ಏರ್ ಪೋರ್ಸ್ ಸ್ಟೇಷನ್‍ನಲ್ಲಿ ನಡೆಸಲಾಯಿತು. ಈ ಬಾರಿಯದ್ದು 15ನೆ ಆವೃತ್ತಿಯ ಏರೋ ಇಂಡಿಯಾ ಪ್ರದರ್ಶನವಾಗಿದ್ದು, ವೈಮಾನಿಕ ಪ್ರದರ್ಶನದಲ್ಲಿ 150 ವಿದೇಶಿ ಕಂಪನಿಗಳು ಸೇರಿದಂತೆ 900ಕ್ಕೂ ಹೆಚ್ಚು ಪ್ರದರ್ಶಕರ ಭಾಗವಹಿಸಿದ್ದಾರೆ. 90ಕ್ಕೂ ಅಧಿಕ ದೇಶಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಅಲ್ಲದೆ 100ಕ್ಕೂ ಹೆಚ್ಚು ಯುದ್ದ ವಿಮಾನ ಸಲಕರಣೆ ತಯಾರಕರ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಏರೋ ಇಂಡಿಯಾ ಕಾರ್ಯಕ್ರಮವು ರಕ್ಷಣಾ ಮಂತ್ರಿಗಳ ಸಮಾವೇಶ, ಸಿಇಒಗಳ ದುಂಡುಮೇಜಿನ ಸಭೆಗಳು, ಸಮರ್ಥ ಸ್ವದೇಶೀಕರಣ ಕಾರ್ಯಕ್ರಮಗಳು, ವಿಚಾರಗೋಷ್ಠಿಗಳು, ವೈಮಾನಿಕ ಪ್ರದರ್ಶನಗಳು ಮತ್ತು ಏರೋಸ್ಪೇಸ್ ಕಂಪನಿಗಳ ಪ್ರದರ್ಶನವನ್ನು ಒಳಗೊಂಡಿತ್ತು.
ಈ ಬಾರಿಯ ಏರೋ ಇಂಡಿಯಾ ಪ್ರದರ್ಶನದಲ್ಲಿ ಪ್ರಾಜೆಕ್ಟ್ ಕುಶಾ ಹೆಸರಿನ ದೀರ್ಘ-ಶ್ರೇಣಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಪ್ರದರ್ಶನವನ್ನು ಕಾಣಬಹುದಾಗಿದೆ. ಖಾಸಗಿ ವಲಯದ ಸೋಲಾರ್ ಇಂಡಸ್ಟ್ರೀಸ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಈ ಕ್ಷಿಪಣಿ ಸುಮಾರು 400 ಕಿ.ಮೀ. ವೈಮಾನಿಕ ಗುರಿಗಳನ್ನು ಸುಲಭವಾಗಿ ಹೊಡೆದುರುಳಿಸವ ಸಾಮಥ್ರ್ಯವನ್ನು ಹೊಂದಿದೆ.