ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ʼನ್ಯಾಯ್ ಗ್ಯಾರಂಟಿʼ ಘೋಷಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಶ್ರಮಿಕ ನ್ಯಾಯ, ಭಾಗೀದಾರರ ನ್ಯಾಯ ಸೇರಿ ಕಾಂಗ್ರೆಸ್ನಿಂದ 5 ಗ್ಯಾರಂಟಿ ಘೋಷಣೆ
ಮಲ್ಲಿಕಾರ್ಜುನ ಖರ್ಗೆ Photo: PTI
ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ನಿಂದ ನಾಲ್ಕು ಮತ್ತು ಐದನೆ ಭರವಸೆಗಳಾದ ‘ಶ್ರಮಿಕ ನ್ಯಾಯ' ಹಾಗೂ ‘ಭಾಗೀದಾರರ(ಹಿಸ್ಸೇದಾರಿ)ನ್ಯಾಯ' ಗ್ಯಾರಂಟಿ ಯೋಜನೆಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದಿಲ್ಲಿ ಘೋಷಣೆ ಮಾಡಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆಗೂಡಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಅವರು ಮಾತನಾಡಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಮುಕ್ತಾಯ ಹಂತದಲ್ಲಿದೆ. ಈಗಾಗಲೇ ಕಿಸಾನ್ ನ್ಯಾಯ, ಯುವ ನ್ಯಾಯ ಹಾಗೂ ನಾರಿ ನ್ಯಾಯ ಗ್ಯಾರಂಟಿಗಳನ್ನು ಘೋಷಿಸಲಾಗಿದೆ. ಈ ಮೂರು ಗ್ಯಾರಂಟಿಗಳಡಿ ತಲಾ 5 ಅಂಶಗಳಂತೆ 15 ಗ್ಯಾರೆಂಟಿಗಳನ್ನು ನೀಡಿದ್ದೇವೆ. ಈಗ ನಾಲ್ಕು ಮತ್ತು ಐದನೇ ಗ್ಯಾರಂಟಿಗಳಾಗಿ ಶ್ರಮಿಕ ನ್ಯಾಯ ಹಾಗೂ ಭಾಗೀದಾರರ(ಹಿಸ್ಸೇದಾರಿ) ನ್ಯಾಯ ಗ್ಯಾರಂಟಿ ಘೋಷಣೆ ಮಾಡುತ್ತಿದ್ದೇವೆ ಎಂದು ಖರ್ಗೆ ತಿಳಿಸಿದರು.
ದೇಶದಲ್ಲಿ ಎಲ್ಲ ಭಾರತೀಯರಿಗೆ ನ್ಯಾಯ ಒದಗಿಸುವುದು ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಹಾಗೂ ನಮ್ಮ ಉದ್ದೇಶ. ಕಾರ್ಮಿಕರ ರಕ್ಷಣೆಗಾಗಿ ಕಾಂಗ್ರೆಸ್ ಸರಕಾರವು ಈವರೆಗೂ ಕನಿಷ್ಠ ವೇತನ ಕಾಯ್ದೆ, ಆರೋಗ್ಯ ವಿಮಾ ಕಾಯ್ದೆ, ಕಾರ್ಮಿಕ ಭವಿಷ್ಯ ನಿಧಿ (ಪಿಎಫ್) ಕಾಯ್ದೆ, ಗ್ರಾಮೀಣ ಉದ್ಯೋಗ ಖಾತ್ರಿ ಸೇರಿದಂತೆ ಅನೇಕ ಕಾನೂನು ಜಾರಿಗೆ ತಂದಿದೆ. ಆದರೆ ಮೋದಿ ಅವರ 10 ವರ್ಷಗಳ ಆಡಳಿತದಲ್ಲಿ ಕಾರ್ಮಿಕರ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. ಮೋದಿ ಸರಕಾರ ನರೇಗಾ ಯೋಜನೆ ಕಾರ್ಮಿಕರ ವೇತನದ ಹಣವನ್ನು ರಾಜ್ಯಗಳಿಗೆ ಈವರೆಗೂ ನೀಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ನಾವು ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇವೆ. ಆದರೆ ನರೇಗಾ ಯೋಜನೆ ಅನುದಾನ ಹಾಗೂ ಬರ ಪರಿಸ್ಥಿತಿಯಲ್ಲಿ ನರೇಗಾ ಯೋಜನೆಯಲ್ಲಿ ಕೂಲಿ ದಿನವನ್ನು 150ಕ್ಕೆ ಏರಿಸುತ್ತಿಲ್ಲ. ಈ ವಿಚಾರವಾಗಿ ನಮ್ಮ ಸಿಎಂ ಹಾಗೂ ಸಚಿವರುಗಳು ಎಷ್ಟೇ ಮನವಿ ನೀಡಿ ಗೋಗರೆದರೂ ಮೋದಿ ಸರಕಾರ ಸಹಕಾರ ನೀಡುತ್ತಿಲ್ಲ. ಕಾರ್ಮಿಕರ ರಕ್ಷಣೆಗಾಗಿ ಇರುವ ಈ ಕಾಯ್ದೆಗಳನ್ನು ಕಡ್ಡಾಯವಾಗಿ ಕಾರ್ಯವಹಿಸಲು ಹಾಗೂ ಕಾರ್ಮಿಕರ ರಕ್ಷಣೆಗೆ ಈ ಶ್ರಮಿಕ ನ್ಯಾಯ ಭರವಸೆ ನೀಡಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ನಮ್ಮ ಸರಕಾರ ಜಾರಿಗೊಳಿಸಲಿದೆ. ನಾವು ಕೊಟ್ಟಿರುವ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಅದಕ್ಕೆ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳೇ ಸಾಕ್ಷಿ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಗ್ಯಾರಂಟಿ ಎಂಬ ಅಂಶವನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಜಾರಿ ಮಾಡಿದ ನಂತರ ಅವರು ಬಳಸುತ್ತಿದ್ದಾರೆ. ನಮಗೂ ಮುಂಚೆ ಅವರಿಗೆ ಗ್ಯಾರಂಟಿ ಯೋಜನೆಯ ಪರಿಕಲ್ಪನೆ ಬಿಜೆಪಿ ಕಾರ್ಯಕರ್ತರು, ಆರೆಸ್ಸೆಸ್ ಕಾರ್ಯಕರ್ತರಲ್ಲಿ ಇತ್ತೇ? ಬಿಜೆಪಿಯವರು ನಮ್ಮ ಕಾರ್ಯಕ್ರಮಗಳನ್ನೇ ಅವರದ್ದು ಎಂದು ಹೇಳಿಕೊಂಡು ಹೋಗುತ್ತಾರೆ. ನಮ್ಮ ಆಲೋಚನೆ ಯೋಜನೆಗಳನ್ನು ಅವರು ಮುಂದುವರಿಸುವುದಾದರೆ ಮಾಡಲಿ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಮ್ಮ ಪಕ್ಷ ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. ನಿರುದ್ಯೋಗ ಸಮಸ್ಯೆ, ಹಣದುಬ್ಬರ ಸಮಸ್ಯೆಗಳು ಪ್ರಮುಖ ವಿಷಯವಾಗಿದ್ದು ಅವುಗಳ ಮೇಲೂ ನಮ್ಮ ಪ್ರಣಾಳಿಕೆ ರೂಪಿಸಲಾಗುವುದು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಪ್ರಧಾನಿ ಮೋದಿ ಹೇಳಿದ ಬುಲೆಟ್ ರೈಲು ಎಲ್ಲಿದೆ. 10 ವರ್ಷ ಕಳೆದರೂ, ಇನ್ನೂ ಬುಲೆಟ್ ರೈಲು ಬಂದಿಲ್ಲ. ನಮ್ಮ ನಾಯಕರು ಸುಳ್ಳು ಹೇಳಲು ಸಿದ್ಧರಿಲ್ಲ. ಆದರೆ ಮೋದಿ ಸುಳ್ಳು ಹೇಳಲು ಹೆದರುವುದಿಲ್ಲ. ಹಳೇ ರೈಲಿಗೆ ಬಣ್ಣ ಹಾಕಿ, ವಂದೇ ಭಾರತ್ ರೈಲು ಬಿಡುತ್ತಿದ್ದಾರೆ. ರೈಲು ಹಳಿ ನಾವು ಮಾಡಿದ್ದೇವೆ. 27 ಹೊಸ ರೈಲುಗಳನ್ನು ನಾವು ನೀಡಿದ್ದೇವೆ. ಚುನಾವಣಾ ಪ್ರಣಾಳಿಕೆ ಸಿದ್ಧ ಪಡಿಸುತ್ತಿದ್ದೇವೆ. ಅನುಷ್ಠಾನವಾಗುವಂತ ಗ್ಯಾರಂಟಿಗಳನ್ನು ನಾವು ರೂಪಿಸುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
‘ಶ್ರಮಿಕ ನ್ಯಾಯ’ದ ಐದು ಗ್ಯಾರಂಟಿಗಳು:
►ಕಾರ್ಮಿಕರಿಗೆ ಆರೋಗ್ಯ ಹಕ್ಕು ಜಾರಿಗೆ ತಂದು ಕಾರ್ಮಿಕರಿಗೆ ಉಚಿತ ಔಷಧಿ, ಚಿಕಿತ್ಸೆ, ಡಯಾಗ್ನೋಸ್ಟಿಕ್ಸ್, ಶಸ್ತ್ರ ಚಿಕಿತ್ಸೆ ನೀಡಲಾಗುವುದು.
►ನರೇಗಾ ಯೋಜನೆ ಅಡಿಯಲ್ಲಿ ಕೂಲಿಗಾರರ ದಿನಗೂಲಿ ಮೊತ್ತವನ್ನು ದೇಶಾದ್ಯಂತ 400 ರೂ.ಗೆ ಏರಿಕೆ ಮಾಡಲಾಗುವುದು.
►ನರೇಗಾ ಮಾದರಿಯಲ್ಲಿ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದು ಆ ಮೂಲಕ ಸಾರ್ವಜನಿಕ ಮೂಲಸೌಕರ್ಯ ನಿರ್ಮಾಣ ಹಾಗೂ ನಗರಗಳಲ್ಲಿ ಹವಾಮಾನ ವೈಪರೀತ್ಯದ ನಿಯಂತ್ರಣ, ಸಾಮಾಜಿಕ ಸೇವೆಗಳ ಅಂತರ ಕಡಿಮೆ ಮಾಡುವುದಾಗಿದೆ.
► ಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ, ಅಪಘಾತ ವಿಮೆಗಳು ಸೇರಿದಂತೆ ಸಾಮಾಜಿಕ ಭದ್ರತೆ ಒದಗಿಸುವುದು.
►ಮೋದಿ ಸರಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆದು ಕಾರ್ಮಿಕರ ಹಕ್ಕನ್ನು ಮರುಸ್ಥಾಪಿಸಲಾಗುವುದು.
ಭಾಗೀದಾರರ ನ್ಯಾಯದ ಐದು ಗ್ಯಾರಂಟಿಗಳು:
► ರಾಷ್ಟ್ರ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ನಡೆಸುವ ಮೂಲಕ ದೇಶದ ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡುವುದು. ಆಡಳಿತದಲ್ಲಿ ಎಲ್ಲಾ ವರ್ಗದವರ ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಲಾಗುವುದು.
►ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಳಕ್ಕೆ ಅಡ್ಡಿಯಾಗಿರುವ ಶೇ.50ರಷ್ಟು ಮಿಸಲಾತಿ ಮಿತಿಯನ್ನು ತಿದ್ದುಪಡಿಗಳ ಮೂಲಕ ಏರಿಕೆ ಮಾಡಲಾಗುವುದು.
►ಆದಿವಾಸಿಗಳಿಗೆ ಅರಣ್ಯ ಹಕ್ಕು ರಕ್ಷಣೆ ಮಾಡಲಾಗುವುದು. ಒಂದು ವರ್ಷದಲ್ಲಿ ಬಾಕಿ ಇರುವ ಅರಣ್ಯ ಹಕ್ಕು ಕಾಯ್ದೆಯ ಬೇಡಿಕೆಯನ್ನು ಪೂರ್ಣಗೊಳಿಸಲಾಗುವುದು. ಇದರ ಜತೆಗೆ ಸಣ್ಣ ಅರಣ್ಯ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ವಿಸ್ತರಣೆ, ಅರಣ್ಯ ಸಂರಕ್ಷಣೆ ಕಾಯ್ದೆ ಹೆಸರಿನಲ್ಲಿ ಮಾಡಲಾಗಿರುವ ಬಡಕಟ್ಟು ವಿರೋಧಿ ತಿದ್ದುಪಡಿಗಳನ್ನು ರದ್ದು ಮಾಡಲಾಗುವುದು.
►ಆದಿವಾಸಿಗಳಿಗೆ ಸ್ವಯಂ ಆಡಳಿತ ಹಾಗೂ ಸಂಸ್ಕೃತಿ ರಕ್ಷಣೆ ಹಕ್ಕು ನೀಡಲಾಗುವುದು.
► ಇನ್ನು ಮಧ್ಯಪ್ರದೇಶ ಛತ್ತೀಸ್ ಗಡ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡದ ಜನ ಅರಣ್ಯ ಪ್ರದೇಶಗಳಿಂದ ವಲಸೆ ಹೋಗುತ್ತಿದ್ದು, ಇವರಿಗಾಗಿ ಜಲ, ಅರಣ್ಯ ಹಾಗೂ ಭೂಮಿಯನ್ನು ನಾವು ರಕ್ಷಣೆ ಮಾಡುತ್ತೇವೆ. ದೊಡ್ಡ ಉದ್ಯಮಿಗಳು ಅರಣ್ಯ ಪ್ರದೇಶಕ್ಕೆ ಕಾಲಿಡುತ್ತಿದ್ದು, ಅವರಿಂದ ಅರಣ್ಯ ರಕ್ಷಣೆ ಮಾಡಲಾಗುವುದು. ಸರಕಾರದಲ್ಲಿರುವ ಮೀಸಲಾತಿ ಹುದ್ದೆಗಳನ್ನು ನೇಮಕ ಮಾಡಲಾಗುವುದು.