ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರಿಸುವುದಕ್ಕೆ ಎಐಡಿಎಸ್‍ಓ ಖಂಡನೆ
ಬೆಂಗಳೂರು: ರಾಮಾಯಣ ಮತ್ತು ಮಹಾಭಾರತವನ್ನು ಇತಿಹಾಸ ಪಠ್ಯಕ್ರಮದಲ್ಲಿ ಸೇರಿಸಲು ಎನ್‍ಸಿಇಆರ್ ಟಿ ಉನ್ನತ ಮಟ್ಟದ ಸಮಿತಿಯ ಶಿಫಾರಸು ದೇಶದಲ್ಲಿ ಇತಿಹಾಸದ ವೈಜ್ಞಾನಿಕ ಅಧ್ಯಯನವನ್ನು ವಿರೂಪಗೊಳಿಸುವ ನಿರಂತರ ಪ್ರಯತ್ನದ ಭಾಗವಾಗಿದೆ ಎಂದು ಆಲ್ ಇಂಡಿಯಾ ಡೆಮೋಕ್ರಾಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್(ಎಐಡಿಎಸ್‍ಓ) ಖಂಡಿಸಿದೆ.
ರವಿವಾರ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಪ್ರಕಟನೆ ಹೊರಡಿಸಿದ್ದು, ರಾಮಾಯಣ ಮತ್ತು ಮಹಾಭಾರತಗಳು ಹಿಂದೂ ಧರ್ಮದ ಭಾಗವಾಗಿ ಪರಿಗಣಿಸಲ್ಪಟ್ಟ ಮಹಾಕಾವ್ಯಗಳಾಗಿವೆ. ಸಮಿತಿಯು ಈ ಪಠ್ಯಗಳನ್ನು 'ಭಾರತದ ಶಾಸ್ತ್ರೀಯ ಯುಗ' ಎಂಬ ಹೊಸ ವರ್ಗೀಕರಣದ ಅಡಿಯಲ್ಲಿ ಸೇರಿಸಲು ಶಿಫಾರಸು ಮಾಡಿದೆ ಮತ್ತು ಸಮಿತಿಯು ಇತಿಹಾಸದ ವರ್ಗೀಕರಣವನ್ನು ಶಾಸ್ತ್ರೀಯ ಯುಗ, ಮಧ್ಯಕಾಲೀನ ಯುಗ, ಬ್ರಿಟಿಷ್ ಯುಗ ಮತ್ತು ಆಧುನಿಕ ಭಾರತ ನಾಲ್ಕು ಯುಗಗಳಾಗಿ ವಿಂಗಡಿಸಿದೆ ಎಂದಿದ್ದಾರೆ.
ಇಲ್ಲಿ ಗಮನಾರ್ಹ ಅಂಶವೆಂದರೆ ಇತಿಹಾಸಕಾರರು ಭಾರತದ ಇತಿಹಾಸವನ್ನು ವೈಜ್ಞಾನಿಕ ಅಧ್ಯಯನ ಮತ್ತು ಪುರಾವೆಗಳ ಆಧಾರದ ಮೇಲೆ ಪ್ರಾಚೀನ ಭಾರತ, ಮಧ್ಯಕಾಲೀನ ಭಾರತ ಮತ್ತು ಆಧುನಿಕ ಭಾರತವನ್ನಾಗಿ ವಿಂಗಡಿಸಿದ್ದಾರೆ. ಇದನ್ನು ಶಾಲಾ ಶಿಕ್ಷಣದಿಂದ ಉನ್ನತ ಅಧ್ಯಯನದವರೆಗೆ ಕಲಿಸಲಾಗುತ್ತದೆ. ಆದರೆ ವಿಪರ್ಯಾಸವೆಂದರೆ, ಇಂತಹ ಬೃಹತ್ ವೈಜ್ಞಾನಿಕ ಪುರಾವೆಗಳ ಹೊರತಾಗಿಯೂ, ಕೇಂದ್ರ ಸರಕಾರವು ಎನ್‍ಸಿಇಆರ್ ಟಿ ಮೂಲಕ ಇತಿಹಾಸವನ್ನು ತಿಳಿದುಕೊಳ್ಳುವ ಮತ್ತು ಅಧ್ಯಯನ ಮಾಡುವ ವೈಜ್ಞಾನಿಕ ಪ್ರಕ್ರಿಯೆಯನ್ನು ನಾಶಪಡಿಸುತ್ತಿದೆ ಎಂದು ಹೇಳಿದ್ದಾರೆ.
ರಾಮಾಯಣ ಮತ್ತು ಮಹಾಭಾರತಗಳು ಆ ಕಾಲದ ಸಾಹಿತ್ಯಿಕ ಮೇರುಕೃತಿಗಳಾಗಿರುವ ಮಹಾಕಾವ್ಯಗಳು. ಅವು ಆ ಕಾಲದ ನೈತಿಕ ಮೌಲ್ಯಗಳು ಮತ್ತು ನೀತಿಗಳನ್ನು ಎತ್ತಿಹಿಡಿಯುವ ಕಾಲ್ಪನಿಕ ಕೃತಿಗಳಾಗಿವೆ. ಆದರೆ ಈ ಮೌಲ್ಯಗಳು ಮತ್ತು ನೀತಿಗಳು ಆಧುನಿಕ ಕಾಲದಲ್ಲಿ ಅನಗತ್ಯ. ಈ ಪಠ್ಯಗಳನ್ನು ಶಾಲಾ ಪಠ್ಯಕ್ರಮದ ಭಾಗವಾಗಿಸುವ ಮೂಲಕ, ಈ ಕಾಲ್ಪನಿಕ ಕೃತಿಗಳನ್ನು ಇನ್ನೂ ವಿವೇಚನಾ ಸಾಮಥ್ರ್ಯವನ್ನು ಬೆಳೆಸಿಕೊಳ್ಳದ ಹೊಸ ತಲೆಮಾರಿನ ವಿದ್ಯಾರ್ಥಿಗಳ ಮುಂದೆ ನಿಜವಾದ ಐತಿಹಾಸಿಕ ಘಟನೆಗಳಾಗಿ ಪ್ರಸ್ತುತಪಡಿಸುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.
ಇದು 'ಪುಷ್ಪಕ ವಿಮಾನ'ದಂತಹ ಕಾಲ್ಪನಿಕ ವಸ್ತುಗಳು ಪ್ರಾಚೀನ ಭಾರತದ ನಿಜವಾದ ಆವಿಷ್ಕಾಗಳು ಎಂಬ ನಿರ್ಲಜ್ಜ ಅವೈಜ್ಞಾನಿಕ ನಿರೂಪಣೆಗೆ ಸಹಾಯ ಮಾಡುವುದಲ್ಲದೆ, ನಿಸ್ಸಂದೇಹವಾಗಿ ಆಡಳಿದಲ್ಲಿ ಹಿಂದುತ್ವದ ಕಾರ್ಯಸೂಚಿಗೆ ಸಹಾಯ ಮಾಡುತ್ತದೆ. ಸಮಿತಿಯು ಭಾರತೀಯ ಜ್ಞಾನ ವ್ಯವಸ್ಥೆ, ವೇದಗಳು ಮತ್ತು ಆಯುರ್ವೇದವನ್ನು ಪಠ್ಯಕ್ರಮದ ಭಾಗವಾಗಿ ಸೇರಿಸಲು ಶಿಫಾರಸು ಮಾಡಿದೆ ಎಂಬುದನ್ನು ಗಮನಿಸಬೇಕಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.