ಶಿಗ್ಗಾಂವಿ ಉಪಚುನಾವಣೆ | ಅ.30ಕ್ಕೆ ನನ್ನ ನಿರ್ಧಾರ ಗೊತ್ತಾಗಲಿದೆ : ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ
"ನಮ್ಮ ಕಾರ್ಯಕರ್ತರು ನಾಮಪತ್ರ ಹಿಂಪಡೆಯಬೇಡಿ ಎಂದು ಒತ್ತಡ ಹೇರುತ್ತಿದ್ದಾರೆ"
ಅಜ್ಜಂಪೀರ್ ಖಾದ್ರಿ
ಬೆಂಗಳೂರು: ‘ನನಗೆ ಪಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಝಮೀರ್, ಸಂತೋಷ್ ಲಾಡ್ ಮುಖ್ಯ. ನಾಮಪತ್ರ ಹಿಂಪಡೆಯುವಂತೆ ಹೇಳಿದ್ದಾರೆ. ಆದರೆ, ನಾನು ನನ್ನ ಕಾರ್ಯಕರ್ತರನ್ನು ಬಿಡುವಂತಿಲ್ಲ. ಅ.30ಕ್ಕೆ ನನ್ನ ನಿರ್ಧಾರ ಗೊತ್ತಾಗಲಿದೆ’ ಎಂದು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನನಗೆ ಕಾವಲು ಹಾಕಿದ್ದಾರೆ. ನನ್ನ ಜೊತೆ ಇಬ್ಬರನ್ನು ಬಿಟ್ಟಿದ್ದಾರೆ, ನಾನು ಸಚಿವ ಝಮೀರ್ ಅಹ್ಮದ್ ಖಾನ್ ಅವರ ನಿವಾಸದಲ್ಲಿದ್ದೇನೆ. ಸಂದಿಗ್ಧ ಪರಿಸ್ಥಿತಿಯಲ್ಲಿದ್ದು, ಕಾಂಗ್ರೆಸ್ ಪಕ್ಷ ಗೆಲ್ಲಬೇಕು. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ನಾಮಪತ್ರ ವಾಪಸ್ ತೆಗೆಯಿಸಿ ಎಂದು ಹೇಳಿದ್ದೇನೆ. ಮುಂದಿನದ್ದು ದೇವರಿಗೆ ಬಿಟ್ಟಿದ್ದೇನೆ’ ಎಂದು ನುಡಿದರು.
ಮುಖ್ಯಮಂತ್ರಿ, ಡಿಸಿಎಂ, ಸಚಿವ ಝಮೀರ್ ಅಹ್ಮದ್ ಮಾತನಾಡಿದ್ದು, ನಾನು ಝಮೀರ್ ಅವರ ನಿವಾಸದಲ್ಲೇ ಇದ್ದೇನೆ. ನನ್ನನ್ನು ಹೈಜಾಕ್ ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಈಗಾಗಲೇ ನನ್ನ ನಿರ್ಧಾರ ಹೇಳಲು ಆಗುವುದಿಲ್ಲ. ನಮ್ಮ ಕಾರ್ಯಕರ್ತರು ನಾಮಪತ್ರ ಹಿಂಪಡೆಯಬೇಡಿ ಎಂದು ಒತ್ತಡ ಹೇರುತ್ತಿದ್ದು, ಅ.30ಕ್ಕೆ ನನ್ನ ತೀರ್ಮಾನ ಗೊತ್ತಾಗಲಿದೆ ಎಂದರು.
ನಾನು ಸಂತ ಶಿಶುನಾಳ ಶರೀಫರಿಂದ ದೀಕ್ಷೆ ಪಡೆದ ಮನೆತನದವನು. ಹೀಗಾಗಿ ಯಾವುದೇ ಸಂದರ್ಭದಲ್ಲೂ ಸುಳ್ಳು ಹೇಳುವುದಿಲ್ಲ. ನಾನೇ ಸದ್ಯ ಗೊಂದಲದಲ್ಲಿದ್ದೇನೆ. ನನಗೆ ಇನ್ನೂ ಸ್ಪಷ್ಟತೆ ಇಲ್ಲ. ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.