ಫ್ರೀಡಂ ಪಾರ್ಕಿನಲ್ಲಿ 10ನೇ ದಿನಕ್ಕೆ ಕಾಲಿಟ್ಟ ಅಕ್ಷರ ದಾಸೋಹ ನೌಕರರ ಧರಣಿ
ಮಳೆಯ ನಡುವೆಯೂ ಮುಂದುವರಿದ ಹೋರಾಟ

ಬೆಂಗಳೂರು, ನ.7: ಕೆಲಸ ಖಾಯಂಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಇಂದಿಗೆ 10ನೆ ದಿನಕ್ಕೆ ಕಾಲಿಟ್ಟಿದ್ದು, ಮಳೆಯ ನಡುವೆಯೂ ಪಟ್ಟುಬಿಡದೆ ಸಾವಿರಾರರು ನೌಕರರ ಮಂಗಳವಾರ ಹೋರಾಟ ನಡೆಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ವಿಧಾನಸೌಧ ಚಲೋ, ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಬಿಸಿಯೂಟ ನೌಕರರು, ಮಂಗಳವಾರ ಸಂಜೆ ಮಳೆಯ ನಡುವೆಯೂ ಧರಣಿ ನಡೆಸಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ಕುರಿತು ಮಾತನಾಡಿದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಬಿಸಿಯೂಟ ತಯಾರಿಸುವ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳ ನಿವಾರಣೆಗಾಗಿ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದು, ನಮ್ಮ ಬೇಡಿಕೆಗಳು ಪೂರ್ಣ ಪ್ರಮಾಣದಲ್ಲಿ ಈಡೇರುತ್ತಿಲ್ಲ. ಹೀಗಾಗಿ, ಈ ಬಾರಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ. ಇನ್ನೂ, ನ.16ರಿಂದ ರಾಜ್ಯ ವ್ಯಾಪಿ ಬಿಸಿಯೂಟ ತಯಾರಿಕೆ ಬಂದ್ ಮಾಡುವ ಕರೆ ನೀಡಲಾಗುವುದು ಎಂದರು.
ಅಕ್ಷರ ದಾಸೋಹ ಯೋಜನೆ ಸಂಪೂರ್ಣವಾಗಿ ಶಿಕ್ಷಣ ಇಲಾಖೆ ಅಡಿಯಲ್ಲಿಯೇ ನಡೆಯಬೇಕು. ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‍ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮ ವಾಪಾಸು ಮಾಡಬೇಕು. 60 ವರ್ಷ ಆಗಿದೆ ಎನ್ನುವ ಕಾರಣದಿಂದ 2022ರಿಂದ ಕೆಲಸದಿಂದ ತೆಗೆದಿರುವ ಎಲ್ಲರಿಗೂ 1 ಲಕ್ಷ ಇಡಿಗಂಟು ಕೊಡಬೇಕು. ಬಜೆಟ್‍ನಲ್ಲಿ ಹೆಚ್ಚಳ ಮಾಡಿರುವ 1 ಸಾವಿರ ವೇತನವನ್ನು ಜನವರಿ ತಿಂಗಳಿಂದ ಅನ್ವಯವಾಗುವಂತೆ ಆದೇಶಿಸಬೇಕು ಎಂದು ಅವರು ಒತ್ತಾಯಿಸಿದರು.
ಹಲವಾರು ವರ್ಷಗಳಿಂದ ಬಿಸಿಯೂಟ ನೌಕರರ ಸಂಘಟನೆಯವರು ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟ ನಡೆಸುತ್ತಿದ್ದರೂ ಈವರೆಗೆ ಫಲ ಸಿಕ್ಕಿಲ್ಲ. ಆ.16, 17ರಂದು ಬೆಂಗಳೂರಿನಲ್ಲಿ ನಡೆದ ಹೋರಾಟ, ಕಳೆದ ವರ್ಷ ಡಿ. 28ರಂದು ಬೆಳಗಾವಿ ಸುವರ್ಣಸೌಧ ಎದುರು ನಡೆದ ಹೋರಾಟ, ಫೆ.13, 14, 15ರಂದು ಬೆಂಗಳೂರಿನಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಸಮಸ್ಯೆ ಬಗೆಹರಿಸುವ ಬಗ್ಗೆ ಭರವಸೆ ನೀಡಲಾಗಿದ್ದರೂ, ಈವರೆಗೂ ಪರಿಹಾರ ಸಿಗದೆ ಇರುವ ಕಾರಣದಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಹೋರಾಟ ಮುಂದುವರಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.