ಕನ್ನಡ ಪರ ಹೋರಾಟಗಾರರ ಮೇಲಿನ ಎಲ್ಲಾ ಪ್ರಕರಣಗಳು ವಾಪಸ್: ಸಿಎಂ ಸಿದ್ದರಾಮಯ್ಯ ಘೋಷಣೆ
ವಿಧಾನಸೌಧ ಆವರಣದಲ್ಲಿ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ

ಬೆಂಗಳೂರು: ಕನ್ನಡಿಗರು ಅನ್ಯ ಭಾಷೆಯವರೊಂದಿಗೆ ಕನ್ನಡದಲ್ಲೇ ಮಾತನಾಡಬೇಕು. ಅವರ ಭಾಷೆಯಲ್ಲಿ ತಪ್ಪು ತಪ್ಪು ಮಾತನಾಡುವ ಬದಲು, ನಮ್ಮ ಭಾಷೆ ಅವರಿಗೆ ಕಲಿಸುವ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಕನ್ನಡದ ವಾತಾವಾರಣ ನಿರ್ಮಿಸಿ, ಭಾಷೆಯ ವಿಷಯದಲ್ಲಿ ಉದಾರವಾದಿಗಳಾಗಿ ಕನ್ನಡಕ್ಕೆ ಕುತ್ತು ತರುವ ಕೆಲಸ ಯಾರೂ ಮಾಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಸೋಮವಾರ ವಿಧಾನಸೌಧದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ’ಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಕನ್ನಡಪರ ಹೋರಾಟಗಾರರ ಎಲ್ಲಾ ಕೇಸ್ ವಾಪಾಸ್ ಪಡೆಯಲಾಗುವುದು ಎಂದು ಘೋಷಣೆ ಮಾಡಿದರು.
ನಾನು ಅನ್ಯ ಭಾಷೆಯ ದ್ವೇಷಿಯಲ್ಲ. ಆದರೆ, ಕನ್ನಡಕ್ಕೆ ಪ್ರಾಧ್ಯಾನತೆ ನೀಡಬೇಕು. ನಾನು ಕನ್ನಡದಲ್ಲಿಯೆ ಸಹಿ ಮಾಡುತ್ತೇನೆ, ಟಿಪ್ಪಣಿ ಬರೆಯುತ್ತೇನೆ. ನಮ್ಮ ಆಡಳಿತ ಕನ್ನಡ ಭಾಷೆಯಲ್ಲಿರಬೇಕು. ಕರ್ನಾಟಕದಲ್ಲಿ ವಾಸ ಮಾಡುವ ಜನರು ಕನ್ನಡವನ್ನು ಕಲಿಯಬೇಕು. ನಮ್ಮ ರಾಜ್ಯದಲ್ಲಿ ಮಾತ್ರ ಕನ್ನಡಿಗರು ಅನ್ಯ ಭಾಷಿಕರೊಂದಿಗೆ ಅವರ ಭಾಷೆಯಲ್ಲಿ ಸಂವಹನ ನಡೆಸುತ್ತಾರೆ. ಆದರೆ, ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳಲ್ಲಿ ಅಂತಹ ವಾತಾವರಣ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆಯು ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧದ ಆವರಣದಲ್ಲಿ ಅನಾವರಣಗೊಳ್ಳುತ್ತಿರುವುದು ರಾಜ್ಯದ 7 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಹಾಗೂ ಐತಿಹಾಸಿಕವಾದ ದಿನವಾಗಿದೆ. ಮೈಸೂರು ರಾಜ್ಯಕ್ಕೆ 1973ರ ನ.1ರಂದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಿದರು. 2023ಕ್ಕೆ ಇದರ ಸುವರ್ಣ ಸಂಭ್ರಮ ಮಾಡಬೇಕಿತ್ತು. ಆದರೆ, ಹಿಂದಿನ ಸರಕಾರ ಮಾಡಲಿಲ್ಲ ಎಂದು ಅವರು ಹೇಳಿದರು.
2023ರಲ್ಲಿ ನಾವು ಅಧಿಕಾರಕ್ಕೆ ಬಂದ ನಂತರ, ಬಜೆಟ್‍ನಲ್ಲಿ ಘೋಷಣೆ ಮಾಡಿ ಇಡೀ ವರ್ಷ ಕನ್ನಡ ಪ್ರತಿಯೊಬ್ಬರಿಗೂ ನಮ್ಮ ನಾಡು, ಭಾಷೆ, ಕಲೆ, ಸಂಸ್ಕೃತಿಯ ಇತಿಹಾಸ ಎಲ್ಲರಿಗೂ ಗೊತ್ತಾಗಬೇಕು ಎಂದು ‘ಕರ್ನಾಟಕ ಸಂಭ್ರಮ-50; ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆವು ಎಂದು ಮುಖ್ಯಮಂತ್ರಿ ತಿಳಿಸಿದರು.
ಕನ್ನಡ ನಾಡಿನ ನೆಲ, ಜಲ, ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಮೈಗೂಡಿಸಿಕೊಂಡು, ಅದನ್ನು ಬೆಳೆಸುವುದು, ಅಭಿಮಾನದಿಂದ ಕಾಣುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ. ಮಕ್ಕಳಿಗೆ ಕನ್ನಡ ಭಾಷೆ ಕಲಿಸುವುದು ಅಗತ್ಯ. ಕನ್ನಡಿಗರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕಲಿಸುತ್ತಾರೆ. ಆದರೆ, ಆ ಮಕ್ಕಳಿಗೆ ಕನ್ನಡ ಬರೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ. ಎಲ್ಲ ಮಕ್ಕಳೂ ಕನ್ನಡವನ್ನು ಭಾಷೆಯಾಗಿ ಕಲಿಯಲೇಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಭುವನೇಶ್ವರಿಯ ಈ ಪ್ರತಿಮೆಯೂ 43 ಅಡಿ ಎತ್ತರವಿದೆ. ಸುಮಾರು 30 ಟನ್ ಕಂಚು ಬಳಸಿ, 21 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಗೊಂಬೆಮನೆ ಶ್ರೀಧರಮೂರ್ತಿ ಈ ಪ್ರತಿಮೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಅವರಿಗೆ ಸರಕಾರ ಹಾಗೂ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಶುಭಾಶಯ ನುಡಿಗಳನ್ನಾಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡಿಗರ ಕುಲದೇವತೆ ತಾಯಿ ಭುವನೇಶ್ವರಿ. ನಮ್ಮ ಮಾತೃ ಭಾಷೆ, ಕನ್ನಡದ ಧ್ವಜ, ನಾಡಗೀತೆಯ ಬಗ್ಗೆ ಅನೇಕ ರಾಜ್ಯಗಳಲ್ಲಿ ಚರ್ಚೆಗಳು ನಡೆದಿವೆ. ಬೇರೆ ಯಾವ ರಾಜ್ಯದಲ್ಲಿಯೂ ನಾಡಗೀತೆ, ನಾಡ ಧ್ವಜ ಇಲ್ಲ. ಇದು ಕರ್ನಾಟಕದಲ್ಲಿ ಮಾತ್ರ ಎಂದು ತಿಳಿಸಿದರು.
ಏಳು ಕೋಟಿ ಕನ್ನಡಿಗರನ್ನು ಕಾಪಾಡುತ್ತಿರುವ ಭುವನೇಶ್ವರಿಗೆ ನಮನ ಸಲ್ಲಿಸುವ ಕೆಲಸ ನಮ್ಮ ಸರಕಾರ ಮಾಡಿದೆ. ನಿಮ್ಮ ಒಂದು ಮತಕ್ಕೆ ಎಷ್ಟು ಶಕ್ತಿ ಇದೆ ನೋಡಿ, ಐದು ಗ್ಯಾರಂಟಿ ಸಿಕ್ಕಿದವು. ನಾಮಫಲಕಗಳು ಶೇ.60ರಷ್ಟು ಕನ್ನಡಮಯವಾದವು. ವಿಧಾನಸೌಧದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದ ನಡುವೆ ಶಕ್ತಿ ದೇವತೆಯಾಗಿ ಭುವನೇಶ್ವರಿ ನಮ್ಮ ರಕ್ಷಣೆಗೆ ಕೂತಿದ್ದಾರೆ ಎಂದು ಅವರು ತಿಳಿಸಿದರು.
ಸಿದ್ದರಾಮಯ್ಯ ವಿಧಾನಸಭೆಗೆ ಮೊದಲ ಬಾರಿ ಬಂದಾಗ ಅವರನ್ನು ರಾಮಕೃಷ್ಣ ಹೆಗಡೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದರು. ಅಂದಿನಿಂದಲೂ ಕನ್ನಡದ ಬಗ್ಗೆ ಅವರಿಗೆ ಅಪಾರ ಪ್ರೀತಿ, ಅಭಿಮಾನ ಇದೆ. ಸಂಪುಟದಲ್ಲಿ ಟಿಪ್ಪಣಿಗಳನ್ನು ಕನ್ನಡದಲ್ಲಿ ಮಂಡಿಸಲು ಸಚಿವರು, ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಕನ್ನಡ ಧ್ವಜ ಕಡ್ಡಾಯ:
ಬೆಂಗಳೂರಿನಲ್ಲಿ ಸುಮಾರು 107 ಭಾಷೆ ಮಾತನಾಡುವ ಜನರಿದ್ದಾರೆ. ಎಲ್ಲ ಸಂಘ ಸಂಸ್ಥೆಗಳು ಖಾಸಗಿ, ಸರಕಾರಿ ಶಾಲೆಗಳಲ್ಲಿ ರಾಜ್ಯೋತ್ಸವದಂದು ಕನ್ನಡದ ಸಾಂಸ್ಕøತಿಕ ಕಾರ್ಯಕ್ರಮಗಳ ಜೊತೆಗೆ ಕನ್ನಡದ ಧ್ವಜ ಹಾರಿಸುವುದನ್ನು ಕಡ್ಡಾಯ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಭುವನೇಶ್ವರಿ ಪ್ರತಿಮೆ ಅನಾವರಣದ ಮೂಲಕ ಕನ್ನಡಿಗರು, ಹೊರನಾಡು ಕನ್ನಡಿಗರು, ಹೊರ ದೇಶದ ಕನ್ನಡಿಗರಿಗೆ ಸಂದೇಶ ಕೊಡುವ ಕೆಲಸ ಮಾಡಿದ್ದೇವೆ. ಕರ್ನಾಟಕ ಸಂಭ್ರಮದ ಕಾರ್ಯಕ್ರಮದ ಅಂಗವಾಗಿ ಲಾಂಛನ, ಲಕೋಟೆ ಬಿಡುಗಡೆ ಮಾಡಿದ್ದೇವೆ, ಇಡೀ ರಾಜ್ಯದಲ್ಲಿ ಕನ್ನಡದ ರಥ ಸಂಚಾರ ಮಾಡಿಸಿದ್ದೇವೆ ಎಂದು ಹೇಳಿದರು.
ಹಲ್ಮಿಡಿ ಶಾಸನವನ್ನು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಅಳವಡಿಸಿದ್ದೇವೆ. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡುವಂತೆ ಮುಖ್ಯಮಂತ್ರಿ ಆದೇಶ ಮಾಡಿದ್ದಾರೆ. ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅವರ ಕಲ್ಯಾಣಕ್ಕಾಗಿ ಕನ್ನಡ ಭವನ ನಿರ್ಮಾಣ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ ಶಿವರಾಜ್ ತಂಗಡಗಿ, ಭುವನೇಶ್ವರಿ ಪ್ರತಿಮೆ ಅನಾವರಣ ಹಾಗೂ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಮಾಡುವಂತಹ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಹೇಳಿದರು.
ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲ್ಪಡುವ ವಿಧಾನಸೌಧದ ಸನ್ನಿಧಿಯಲ್ಲಿ ನಾಡದೇವಿ ಭುವನೇಶ್ವರಿಯ ಕಂಚಿತ ಪ್ರತಿಮೆ ಅನಾವರಣವಾಗಿದೆ. ಈ ಕಾರ್ಯಕ್ರಮ ಕೇವಲ ಕನ್ನಡಿಗರಿಗೆ ಮಾತ್ರವಲ್ಲ, ವಿಶ್ವದ ಎಲ್ಲ ಕಡೆ ಇರುವ ಕನ್ನಡಿಗರಿಗೆ ಗೌರವ, ಹೆಮ್ಮೆ ತರುವ ಕೆಲಸ ಸರಕಾರ ಮಾಡಿದೆ. ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಭವಿಷ್ಯದ ಜನಾಂಗಕ್ಕೆ ತಿಳಿಯಲು ಪ್ರತಿಮೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಆಳವಾಗಿ ಬೇರೂರುತ್ತಿದೆ. ಆದರೂ, ಕನ್ನಡ ಸಂಸ್ಕೃತಿಯನ್ನು ಮೆಟ್ಟಿ ಹೋಗಲು ಅದಕ್ಕೆ ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಬೇರೆ ಬೇರೆ ಜಾತಿ, ಧರ್ಮದವರೂ ಇದ್ದರೂ ಭುವನೇಶ್ವರಿಯ ಕಂಚಿನ ಪ್ರತಿಮೆಯೂ ಅವರೆಲ್ಲರಿಗೂ ಗೌರವದ ಕಿರೀಟವಾಗಿದೆ. ನಮ್ಮ ಕರಾವಳಿ ಭಾಗದಲ್ಲಿ ಬಳಸುವಂತಹ ತುಳು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕೆಲಸವನ್ನು ಸರಕಾರ ಮುಂದಿನ ದಿನಗಳಲ್ಲಿ ಮಾಡುತ್ತದೆ ಎಂಬ ವಿಶ್ವಾಸವಿದೆ ಎಂದು ಖಾದರ್ ತಿಳಿಸಿದರು.
ಕರ್ನಾಟಕ ಸಂಭ್ರಮ-50, ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಕಾರ್ಯಕ್ರಮದ ಅಂಗವಾಗಿ ನಡೆದ ಅಭಿಯಾನದ ಸಚಿತ್ರ ಪುಸ್ತಕವನ್ನು ಬಿಡುಗಡೆ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಶಾಸಕ ರಿಝ್ವಾನ್ ಅರ್ಶದ್ ವಹಿಸಿದ್ದರು. ಸಂಸ್ಕøತಿ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳಾ ಸ್ವಾಗತಿಸಿದರು. ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್, ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಸಲೀಂ ಅಹ್ಮದ್, ಡಿ.ಟಿ.ಶ್ರೀನಿವಾಸ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ಟಿ.ಬಿ.ಜಯಚಂದ್ರ, ಎ.ಎಸ್.ಪೊನ್ನಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮನೆ, ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.