ಶಾಸಕರ ನಿಂದನೆ,ಕೊಲೆ ಬೆದರಿಕೆ ಆರೋಪ; ಬಿಬಿಎಂಪಿ ಮಾಜಿ ಸದಸ್ಯನ ವಿರುದ್ಧ ಕಾನೂನು ಕ್ರಮ: ಸಚಿವ ಎಚ್.ಸಿ.ಮಹದೇವಪ್ಪ
ಬೆಂಗಳೂರು: ಕಾನೂನಿನ ಮುಂದೆ ಎಲ್ಲ ಸಮಾನರು. ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಶಾಸಕ ಕೆ.ಗೋಪಾಲಯ್ಯ ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ಬಿಬಿಎಂಪಿ ಮಾಜಿ ಸದಸ್ಯನ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಸಮಾಜಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರು ತಿಳಿಸಿದರು.
ಸದಸ್ಯ ಕೆ.ಗೋಪಾಲಯ್ಯ ಅವರು ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಮಹದೇವಪ್ಪ ಅವರು, ಶಾಸಕರ ಸುರಕ್ಷತೆಗೆ ಧಕ್ಕೆ ಬಂದಿರುವುದು ಅತ್ಯಂತ ಆತಂಕದ ವಿಷಯ. ಬಿಬಿಎಂಪಿ ಮಾಜಿ ಸದಸ್ಯನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಶಾಸಕ ಗೋಪಾಲಯ್ಯ ಅವರು ಮಾತನಾಡಿ, ಬಿಬಿಎಂಪಿ ಮಾಜಿ ಸದಸ್ಯನೊಬ್ಬ ನಿನ್ನೆ ರಾತ್ರಿ 11ಕ್ಕೆ ಕರೆ ಮಾಡಿ ಅತ್ಯಂತ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಕೊಲೆಬೆದರಿಕೆ ಹಾಕಿದ್ದಾರೆ. ಹಣಕ್ಕಾಗಿ ಬ್ಲ್ಯಾಕ್ ಮೇಲೆ ಮಾಡಿದ್ದಾರೆ. ಇವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಿದ್ದರೂ ಅವರನ್ನು ಪೊಲೀಸರು ಬಂಧಿಸಿಲ್ಲ ಎಂದರು.
ಬಸವೇಶ್ವರ ಲೇಔಟ್ ನಲ್ಲಿ ಕ್ಲಬ್ ನಡೆಸುತ್ತಿರುವ ಬಿಬಿಎಂಪಿ ಮಾಜಿ ಸದಸ್ಯ ಕಂಠಪೂರ್ತಿ ಕುಡಿದು ಇದೇ ರೀತಿಯ ತೊಂದರೆ ಕೊಡುತ್ತಿದ್ದಾನೆ. ನನ್ನಂತೆಯೇ ಶಾಸಕರಾದ ಸುರೇಶ್ ಕುಮಾರ್ ಅವರಿಗೂ ತೊಂದರೆಕೊಟ್ಟಿದ್ದಾನೆ. ಸದರಿ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಅವರನ್ನು ಗಡಿಪಾರು ಮಾಡಬೇಕು. ನನ್ನ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು. ಬೆಂಗಳೂರಿನಲ್ಲಿ ನಡೆಯುತ್ತಿರುವ ಅನಧಿಕೃತ ಕ್ಲಬ್ ಗಳನ್ನು ಕೂಡಲೇ ಬಂದ್ ಮಾಡುವಂತೆ ಅವರು ಮನವಿ ಮಾಡಿದರು.
ಶಾಸಕರಾದ ಸುರೇಶಕುಮಾರ್, ವಿರೋಧಪಕ್ಷದ ನಾಯಕ ಅಶೋಕ ಕುಮಾರ್ ಅವರು ಸಹ ನಾವು ಕೂಡ ಆ ವ್ಯಕ್ತಿಯಿಂದ ಬಾಧಿತರಾಗಿದ್ದೇವೆ. ಅವನ ವಿರುದ್ಧ ಕೂಡಲೇ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು, ಸದನ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು. ಕಾನೂನು ಪ್ರಕಾರ ಇಂದು ಸಂಜೆಯೊಳಗೆ ಅವರನ್ನು ಬಂಧಿಸಬೇಕು. ಆ ವ್ಯಾಪ್ತಿಯ ಇನ್‌ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಬೇಕು ಎಂದು ತಿಳಿಸಿದರು.