ಲಾರಿ ಚಾಲಕರಿಂದ ಹಣಕ್ಕೆ ಬೇಡಿಕೆ ಆರೋಪ: ಬಿಜೆಪಿ ನಾಯಕ ಮಣಿಕಂಠ ರಾಠೋಡ್ ವಿರುದ್ಧ ಪ್ರಕರಣ ದಾಖಲು
ಚಿತ್ತಾಪುರ: ಮರಳು ಗಣಿಗಾರಿಕೆಗೆ ಪರವಾನಗಿ ಪಡೆದಿರುವವರಿಗೆ ಸೇರಿದ ಮರಳು ಟಿಪ್ಪರ್ ತಡೆದು ತನಗೆ ತಿಂಗಳಿಗೆ ಹಫ್ತಾ ಕೊಡಬೇಕು ಎಂದು ಬೇಡಿಕೆ ಇರಿಸಿ ಬೆದರಿಕೆ ಹಾಕಿರುವ ಆರೋಪದಡಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಹಾಗೂ ಇತರರ ವಿರುದ್ದ ತಾಲೂಕಿನ ಮಾಡಬೂಳ ಪೊಲೀಸ್ ಠಾಣೆಯಲ್ಲಿ ರವಿವಾರ ಎಫ್‌ಐಆರ್ ದಾಖಲಾಗಿದೆ.
ಶನಿವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಎರಡು ಟಿಪ್ಪರ್ ಮರಳು ತುಂಬಿಕೊಂಡು ಕಲಬುರಗಿಗೆ ತೆರಳುತ್ತಿದ್ದಾಗ ತಾಲೂಕಿನ ಗುಂಡಗುರ್ತಿ ಗ್ರಾಮದ ಹತ್ತಿರ ಮಣಿಕಂಠ ರಾಠೋಡ ಅವರು ಕಳುಹಿಸಿಕೊಟ್ಟಿದ್ದ ಉಮೇಶ ರಾಠೋಡ ಹಾಗೂ ಆತನ ಮೂವರು ಗೆಳೆಯರು ಬಂದು ಟಿಪ್ಪರ್ ತಡೆದಿದ್ದಾರೆ ಎಂದು ಮರಳು ಸಾಗಣೆ ಪರವಾನಗಿದಾರ ಸೇಡಂ ತಾಲೂಕಿನ ರಂಜೋಳದ ಅಬ್ದುಲ್ ಹಫೀಜ್ ಅಬ್ದುಲ್ ರಶೀದ್ ಠಾಣೆಗೆ ರವಿವಾರ ದೂರು ನೀಡಿದ್ದಾರೆ.
ಟಿಪ್ಪರ್ ತಡೆದಿದ್ದ ಹುಡುಗರು ಅನಧಿಕೃತ ಮರಳು ಸಾಗಿಸುತ್ತಿದ್ದೀರಿ ಎಂದು ಟಿಪ್ಪರ್ ಚಾಲಕರಿಗೆ ಹೇಳಿ ನಮ್ಮಬಾಸ್ ಬರುತ್ತಾರೆ ಎಂದು ಒಂದು ಗಂಟೆ ಕಾಲ ಟಿಪ್ಪರ್ ನಿಲ್ಲಿಸಿದ್ದಾರೆ. ಈ ವಿಷಯ ಟಿಪ್ಪರ್ ಚಾಲಕರು ನಮ್ಮ ಗಮನಕ್ಕ ತಂದಿದ್ದಾರೆ. ಸಂಜೆ ಮಾಡಬೂಳ ಠಾಣೆಗೆ ಬಂದ ಮಣಿಕಂಠ ರಾಠೋಡ, "ನೀವು ಮರಳು ಸಾಗಾಣಿಕೆ ಮಾಡಲು ನನಗೆ ದಿನಾಲೂ ನಾಲ್ಕು ಟಿಪ್ಪರ್ ಮರಳು ಉಚಿತವಾಗಿ ತುಂಬಿ ಕೊಡಬೇಕು. ಇಲ್ಲದಿದ್ದರೆ 7 ಲಕ್ಷ ಕೊಡಬೇಕು ಎಂದು ಬೇಡಿಕೆ ಇಟ್ಟರುʼʼ ಎಂದು ದೂರುದಾರ ಆಪಾದಿಸಿದ್ದಾರೆ.
ಮಾಡಬೂಳ ಠಾಣೆಯಲ್ಲಿ ಉಮೇಶ ರಾಠೋಡ, ಮಣಿಕಂಠ ರಾಠೋಡ, ಇತರೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.