ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ : ಪ್ರಕರಣ ಸಿಐಡಿ ಹೆಗಲಿಗೆ
ಬೆಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ‘ಪೋಕ್ಸೊ ಕಾಯ್ದೆ’ಯಡಿ ಎಫ್‍ಐಆರ್ ದಾಖಲಾಗಿದೆ. ಇದರ ನಡುವೆ ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಆದೇಶ ಹೊರಡಿಸಿದೆ.
ಅಪ್ರಾಪ್ತಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿ ಸಂತ್ರಸ್ತೆಯ ತಾಯಿ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಸಂಬಂಧ ಪೋಕ್ಸೊ ಕಾಯ್ದೆ ಮತ್ತು 354(ಎ) ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಮೊಕದ್ದಮೆ ದಾಖಲು ಮಾಡಿಕೊಂಡಿದ್ದರು. ಆ ಬಳಿಕ ಪ್ರಕರಣ ಗಂಭೀರವಾಗಿರುವ ಹಿನ್ನೆಲೆ ರಾಜ್ಯ ಸರಕಾರವು ತನಿಖೆಯನ್ನು ಸಿಐಡಿಗೆ ಒಪ್ಪಿಸಿದೆ.
ಎಫ್‍ಐಆರ್ ಏನಿದೆ?: ‘ಅತ್ಯಾಚಾರ ಪ್ರಕರಣದಲ್ಲಿ ನಮಗೆ ಅನ್ಯಾಯವಾಗಿದ್ದು, ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಲು ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಸಂತ್ರಸ್ತೆ ಹಾಗೂ ಆಕೆಯ ತಾಯಿ ಫೆ.2ರಂದು ತೆರಳಿದ್ದರು. ಈ ಸಂದರ್ಭದಲ್ಲಿ 10 ನಿಮಿಷಗಳ ಕಾಲ ಮಾತನಾಡಿದ ಯಡಿಯೂರಪ್ಪ, ನನ್ನ ಪುತ್ರಿಯನ್ನು ಕೋಣೆಗೆ ಕರೆದೊಯ್ದು ಬಾಗಿಲು ಹಾಕಿದ್ದಾರೆ ಎಂದು ಎಫ್‍ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ, ಕೊಠಡಿಯಲ್ಲಿ ಐದು ನಿಮಿಷಗಳ ಕಾಲ ಇದ್ದಾಗ, ಪುತ್ರಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು. ನಂತರ ನನ್ನ ಪುತ್ರಿ ಕೋಣೆಯಿಂದ ಗಾಬರಿಪಟ್ಟು ಓಡಿಬಂದು ನನ್ನಲ್ಲಿ ದುಃಖದಿಂದ ಅಳುತ್ತಾ ನಡೆದ ಘಟನೆಯನ್ನು ಹೇಳಿಕೊಂಡಳು ಎಂದು ಎಫ್‍ಐಆರ್ ನಲ್ಲಿ ದೂರುದಾರೆ ಸಂತ್ರಸ್ತೆಯ ಹೇಳಿಕೆ ದಾಖಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಸಂತ್ರಸ್ತೆ ಹಾಗೂ ತಾಯಿಯೊಂದಿಗೆ ಮಾತನಾಡಿ, ‘ಕ್ಷಮೆಯಾಚನೆ ಮಾಡಿದಲ್ಲದೆ, ಈ ವಿಷಯವನ್ನು ಹೊರಗೆ ಯಾರಿಗೂ ಬಹಿರಂಗಪಡಿಸದಂತೆ ವಿನಂತಿಸಿದರು’ ಎಂದೂ ಎಫ್‍ಐಆರ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಸಂತ್ರಸ್ತೆಯ ತಾಯಿ ನೀಡಿರುವ ದೂರಿನ ಆಧಾರದ ಮೇಲೆ ಸದಾಶಿವನಗರ ಪೊಲೀಸರು ಗುರುವಾರ ರಾತ್ರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಿಐಡಿಗೆ ವರ್ಗಾವಣೆ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಶುಕ್ರವಾರ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಸರಕಾರ ತಿಳಿಸಿದೆ.
53 ಮಂದಿ ವಿರುದ್ಧ ಮಹಿಳೆ ದೂರು: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪ್ರಕರಣದ ಜತೆಗೆ ಸಂತ್ರಸ್ತೆಯ ತಾಯಿ, ಈ ಮೊದಲು ನಮಗೆ ಅತ್ಯಾಚಾರ ಪ್ರಕರಣದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಹಿರಿಯ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಒಟ್ಟು 53 ಮಂದಿ ವಿರುದ್ಧ ಸದಾಶಿವನಗರ ಠಾಣೆಗೆ ದೂರು ನೀಡಿದ್ದು, ವಿಶೇಷ ತನಿಖಾ ತಂಡ ರಚಿಸಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಒತ್ತಾಯಿಸಿದ್ದಾರೆ.