ಕೋವಿಡ್ ನಿಯಮ ಉಲ್ಲಂಘನೆ ಆರೋಪ: ಸಚಿವ ಚಲುವರಾಯಸ್ವಾಮಿ ವಿರುದ್ಧದ ಪ್ರಕರಣ ರದ್ದು
ಬೆಂಗಳೂರು, ಆ.8: ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ಜಾರಿಗೆ ಆಗ್ರಹಿಸಿ ಪಾದೆಯಾತ್ರೆ ನಡೆಸಿದ್ದ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಕುರಿತು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಕನಕಪುರ ತಾಲೂಕಿನ ಐಜೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‍ಐಆರ್ ಹಾಗೂ ನಗರದ 42ನೆ ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ತಮ್ಮ ವಿರುದ್ಧದ ಎಫ್‍ಐಆರ್ ಮತ್ತು ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಚಿವ ಚಲುವರಾಯ ಸ್ವಾಮಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಈ ಆದೇಶ ನೀಡಿದೆ.
ಇದೇ ಆರೋಪದ ಮೇಲೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಐಜೂರು ಠಾಣಾ ಪೊಲೀಸರು ದಾಖಲಿಸಿದ್ದ ಎಫ್‍ಐಆರ್ ಅನ್ನು ಹೈಕೋರ್ಟ್ ಈ ಹಿಂದೆ ರದ್ದುಪಡಿಸಿತ್ತು. ಆ ಆದೇಶವನ್ನು ಪರಿಗಣಿಸಿದ ಇದೀಗ ಚಲುವರಾಯಸ್ವಾಮಿ ಮೇಲಿನ ಪ್ರಕರಣವನ್ನೂ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕ್ರಮ ಜರುಗಿಸಲು ಸರಕಾರ ಮುಂದಾಗಿದ್ದು, ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ, ತಮ್ಮ ವಿರುದ್ಧದ ಎಫ್‍ಐಆರ್, ಎಸಿಎಂಎಂ ನ್ಯಾಯಾಲಯದ ಸಮನ್ಸ್ ಮತ್ತು ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದರು. ಆ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.