4.8 ಕೋಟಿ ರೂ. ನಗದು ವಶ: ಬಿಜೆಪಿ ಅಭ್ಯರ್ಥಿ ಕೆ. ಸುಧಾಕರ್ ವಿರುದ್ಧ ಪ್ರಕರಣ ದಾಖಲು
ಕೆ.ಸುಧಾಕರ್
ಬೆಂಗಳೂರು: ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಲ್ಲಿ ಚುನಾವಣಾ ಆಯೋಗದ ಫೈಯಿಂಗ್ ಸ್ಕ್ಯಾಡ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಿದೆ. ಯಲಹಂಕದ ವ್ಯಕ್ತಿಯೊಬ್ಬರಿಂದ 4.8 ಕೋಟಿ ರೂಪಾಯಿಯನ್ನು ವಿಶೇಷ ತಂಡ ವಶಪಡಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗೋವಿಂದಪ್ಪ ಎಂಬವರ ಮನೆಯಿಂದ ಈ ಭಾರಿ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದ್ದು, 500 ರೂಪಾಯಿಗಳ ಬಂಡಲ್ಗಳಾಗಿ ಇವುಗಳನ್ನು ಕೂಡಿಡಲಾಗಿತ್ತು. ಗೋವಿಂದಪ್ಪ ಅವರನ್ನು ವಿಚಾರಣೆಗೆ ಗುರಿಪಡಿಸಿದ ಬಳಿಕ ಅವರು ನೀಡಿದ ಮಾಹಿತಿ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಘಟನೆಯ ಬೆನ್ನಲ್ಲೇ ಆದಾಯ ತೆರಿಗೆ ಅಧಿಕಾರಿಗಳು ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಚುನಾವಣಾ ಆಯೋಗ ಒಟ್ಟು 50 ಕೋಟಿ ರೂಪಾಯಿ ಮೌಲ್ಯದ ನಗದು, ಮದ್ಯ, ಮಾದಕ ವಸ್ತು ಮತ್ತು ಉಡುಗೊರೆಗಳನ್ನು ವಶಪಡಿಸಿಕೊಂಡಿದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಅಂದರೆ ಎಪ್ರಿಲ್ 26 ಮತ್ತು ಮೇ 7ರಂದು ಚುನಾವಣೆ ನಡೆಯುತ್ತಿದೆ.