ಬಿಜೆಪಿ ಜೊತೆ ಮೈತ್ರಿ ವಿಚಾರ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರತಿಕ್ರಿಯೆ ಏನು?
ರಾಮನಗರ: ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಪ್ರತಿಕ್ರಿಯಿಸಿದ್ದಾರೆ.
ಚನ್ನಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ``ಈ ವಿಚಾರವಾಗಿ ನಾನು ಹೆಚ್ಚಿಗೆ ಹೇಳಲು ಬಯಸುವುದಿಲ್ಲ. ನಮ್ಮ ಮೇಲೆ ಅಷ್ಟಾದರೂ ಪ್ರೀತಿ ಇಟ್ಟಿರುವುದಕ್ಕೆ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಕೊನೆ ಪಕ್ಷ ಅವರಿಗಾದರೂ ಜೆಡಿಎಸ್ ಹುಡುಗಿ ಇಷ್ಟ ಆದಳಲ್ಲʼʼ ಎಂದು ಹೇಳಿದ್ದಾರೆ.
ʼʼಮೈತ್ರಿ ಸಂಬಂಧ ಈವರೆಗೆ ಪಕ್ಷದ ವೇದಿಕೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಸೆಪ್ಟೆಂಬರ್ 10 ಕ್ಕೆ ಕಾರ್ಯಕರ್ತ ಸಭೆ ಕರೆದಿದ್ದು, ಅಲ್ಲಿಎಲ್ಲರ ಅಭಿಪ್ರಾಯ ಪಡೆದ ನಂತರವಷ್ಟೇ ನಮ್ಮ ನಾಯಕರು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿರುವ ಶಾಸಕರಾದ ಜಿ.ಟಿ.ದೇವೇಗೌಡ ಸೇರಿದಂತೆ ಸಮಿತಿ ಸದಸ್ಯರು ರಾಜ್ಯ ಪ್ರವಾಸ ಮಾಡಿ ಎಲ್ಲರ ಅಭಿಪ್ರಾಯ ಪಡೆದು ಅದನ್ನು ವರಿಷ್ಠರ ಮುಂದಿಟ್ಟ ನಂತರವಷ್ಟೇ ಮೈತ್ರಿ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದುʼʼ ಎಂದು ತಿಳಿಸಿದ್ದಾರೆ.
ಮೈತ್ರಿ ಅನಿವಾರ್ಯ ಎಂದ ಜಿ.ಟಿ ದೇವೇಗೌಡ
ʼʼನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಏನಾದರೂ ಮಾಡಿಕೊಳ್ಳಲಿ. ಆದರೆ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಹೊಂದಾಣಿಕೆ ಮಾಡಿಕೊಳ್ಳುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಲ್ಲಿ ಮನವಿ ಮಾಡಿದ್ದೇವೆʼʼ ಎಂದು ಜೆಡಿಎಸ್ ಹಿರಿಯ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.