ವಿದೇಶಿ ಪ್ರಜೆಗಳು ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿಚಾರ: ಸದನದಲ್ಲಿ ಸುದೀರ್ಘ ಚರ್ಚೆಗೆ ಅವಕಾಶ

ವಿಧಾನಸಭಾಧ್ಯಕ್ಷ ಯು.ಟಿ. ಖಾದರ್
ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪಗೊಂಡು ಈ ಬಗ್ಗೆ ಅರ್ಧ ಗಂಟೆ ಚರ್ಚೆಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವಕಾಶ ಕಲ್ಪಿಸಿದರು.
ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಮಾನಪ್ಪ ಡಿ.ವಜ್ಜಲ್ ಪ್ರಸ್ತಾಪಿಸಿ, ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಸಂಖ್ಯೆ ಎಷ್ಟು ಎಂದು ಗೃಹ ಸಚಿವರಿಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಗೃಹ ಸಚಿವರು ಕಳೆದ 20 ವರ್ಷಗಳಲ್ಲಿ 566 ಮಂದಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಗುರುತಿಸಲಾಗಿದೆ. ಇವರಲ್ಲಿ 193 ಅಕ್ರಮ ವಲಸಿಗರನ್ನು ಗಡಿಪಾರು ಮಾಡಲಾಗಿದ್ದು, 212 ಅಕ್ರಮ ವಲಸಿಗರ ಪ್ರಕ್ರಿಯ ಚಾಲ್ತಿಯಲ್ಲಿದೆ. 121 ಅಕ್ರಮ ವಲಸಿಗರು ಬಂಧನದಲ್ಲಿದ್ದು, ನಾಲ್ವರು ಜಾಮೀನಿನ ಮೇಲೆ ನೆಲೆಸಿದ್ದಾರೆ ಎಂದು ಉತ್ತರ ನೀಡಿದರು.
ಈ ಉತ್ತರದಿಂದ ಅಸಮಾಧಾನಗೊಂಡ ಸದಸ್ಯ ಮಾನಪ್ಪ ಡಿ.ವಜ್ಜಲ್, ಸರಕಾರದ ಉತ್ತರ ಸರಿ ಇಲ್ಲ. ನನಗಿರುವ ಮಾಹಿತಿ ಪ್ರಕಾರ ವಿಜಯಪುರ ಜಿಲ್ಲೆ ಒಂದರಲ್ಲೆ 15 ಸಾವಿರ ಅಕ್ರಮ ವಲಸಿಗರು ನೆಲೆಸಿದ್ದಾರೆ. ರಾಜ್ಯದ ಎಲ್ಲೆಡೆ ಲಕ್ಷಾಂತರ ಜನ ಇದ್ದಾರೆ ಎಂಬ ಮಾಹಿತಿ ಇದೆ. ಈ ಅಕ್ರಮ ವಲಸಿಗರು ರೇಷನ್ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಎಲ್ಲವನ್ನು ಪಡೆದುಕೊಂಡಿದ್ದಾರೆ. ಇವರ ಕೆಲಸ ಗಾಂಜಾ, ಅಫೀಮು ಮಾರುವುದಾಗಿದೆ. ಇದರಿಂದ ನಮ್ಮ ಯುವಕರ ದಾರಿ ತಪ್ಪುತ್ತಿದ್ದಾರೆ ಎಂದರು.
ಇದಕ್ಕೆ ದ್ವನಿಗೂಡಿಸಿದ ಬಿಜೆಪಿಯ ಸುನೀಲ್ಕುಮಾರ್ ಅವರು, ಅಕ್ರಮ ವಲಸಿಗರ ಸಮಸ್ಯೆ ರಾಷ್ಟ್ರೀಯ ಭದ್ರತೆ ಸವಾಲು, ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದರೆ ಒಳ್ಳೆಯದು ಎಂದಾಗ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸಹ ಇದಕ್ಕೆ ಪೂರಕವಾಗಿ ಮಾತನಾಡಿ, ಅಕ್ರಮ ವಲಸಿಗರ ಸಮಸ್ಯೆ ಗಂಭೀರ ಸಮಸ್ಯೆ. ಈ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು. ಆಗ ಸಭಾಧ್ಯಕ್ಷರು ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿ, ಮುಂದಿನ ಪ್ರಶ್ನೆಯನ್ನು ಕೈಗೆತ್ತಿಕೊಂಡರು.