ಚುನಾವಣಾ ಆಯೋಗದ ಎಚ್ಚರಿಕೆಯನ್ನು ಕಸದ ಬುಟ್ಟಿಗೆ ಎಸೆದ ಅಮಿತ್ ಶಾ: ದಿನೇಶ್ ಗುಂಡೂರಾವ್
Photo: X/Dineshgundurao
ಬೆಂಗಳೂರು : ಚುನಾವಣಾ ಕಣದಲ್ಲಿ ಮುಂದೆಯೂ ಮುಸ್ಲಿಮರ ಮೀಸಲಾತಿ ಬಗ್ಗೆ ಪ್ರಸ್ತಾಪ ಮಾಡುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಿಟಿಐ ಸಂದರ್ಶನದಲ್ಲಿ ಹೇಳಿದ್ದಾರೆ. ಇದು ಚುನಾವಣಾ ಆಯೋಗದ ಎಚ್ಚರಿಕೆಯನ್ನು ಕಸದ ಬುಟ್ಟಿಗೆ ಎಸೆಯುವಂತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಮೊನ್ನೆಯಷ್ಟೇ ಕೇಂದ್ರ ಚುನಾವಣಾ ಆಯೋಗ ಧರ್ಮದ ಆಧಾರದಲ್ಲಿ ಪ್ರಚಾರ ಬೇಡ ಎಂದು ಬೋಧನೆ ಮಾಡಿತ್ತು. ಆದರೆ ಅಮಿತ್ ಶಾ ಹೇಳಿಕೆ ಚುನಾವಣಾ ಆಯೋಗದ ಎಚ್ಚರಿಕೆಯನ್ನು ಕಸದ ಬುಟ್ಟಿಗೆ ಎಸೆಯುವಂತಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವರೇ ಚುನಾವಣಾ ಆಯೋಗದ ಎಚ್ಚರಿಕೆಯನ್ನು ಬಹಿರಂಗವಾಗಿ ತಿರಸ್ಕರಿಸುತ್ತಿರುವಾಗ ಆಯೋಗ ದಕ್ಷವಾಗಿದೆ ಎಂದು ಭಾವಿಸುವುದು ಹೇಗೆ.?. ಅಮಿತ್ ಶಾ ಹೇಳಿಕೆ ಚುನಾವಣಾ ಆಯೋಗ ಹಲ್ಲು ಕಿತ್ತ ಹಾವು ಎಂದು ನಿರೂಪಿಸಿದಂತಾಗಿದೆ. ಇಂತಹ ಚುನಾವಣಾ ಆಯೋಗದಿಂದ ಮುಕ್ತ, ನಿರ್ಭೀತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಿರೀಕ್ಷಿಸಲು ಸಾಧ್ಯವೇ.?. ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.