ಸಕಲೇಶಪುರ| ಡೆಂಗ್ಯೂ ಜಾಗೃತಿಗೆ ತೆರಳಿದ್ದ ಅಂಗನವಾಡಿ ಸಹಾಯಕಿಗೆ ಜಾತಿ ನಿಂದನೆ: ಆರೋಪ
ಸಕಲೇಶಪುರ: ಡೆಂಗ್ಯೂ ಜಾಗೃತಿಗೆ ತೆರಳಿದ್ದ ಅಂಗನವಾಡಿ ಸಹಾಯಕಿಗೆ ಜಾತಿ ನಿಂದನೆ ಮಾಡಿದ್ದಾರೆನ್ನಲಾದ ಘಟನೆ ತಾಲೂಕಿನ ಮಠಸಾಗರ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಸಹಾಯಕಿ ತೇಜ ನೀಡಿದ ದೂರಿನ ಅನ್ವಯ ಕುಮಾರಸ್ವಾಮಿ ಮತ್ತು ಆಕೆಯ ಪತ್ನಿ ಶೃತಿ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗನವಾಡಿ ಸಹಾಯಕಿ ತೇಜ ಎಂಬವರು ಮನೆ ಮನೆಗೆ ತೆರಳಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸುತ್ತಿದ್ದರು. ಈ ವೇಳೆ ಗ್ರಾಮದ ಕುಮಾರಸ್ವಾಮಿ ಎಂಬವರ ಮನೆ ಒಳಗೆ ಹೋಗಿದ್ದರು. ತೇಜ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಎಂದು ಗೊತ್ತಾದ ಬಳಿಕ ಕುಮಾರಸ್ವಾಮಿ ಹಾಗೂ ಅವರ ಮನೆಯವರು ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಲಿಂಗಾಯತ ಜಾತಿಗೆ ಸೇರಿದ ಕುಮಾರಸ್ವಾಮಿ ಮತ್ತು ಪತ್ನಿ ಶ್ರುತಿ ಎಂಬುವರು ಅಂಗನವಾಡಿ ಸಹಾಯಕಿಯನ್ನ ಒಳಗೆ ಕರೆದು, ನೀನು ನಮ್ ಮನೆ ಒಳಗೆ ಯಾಕೆ ಬಂದೆ. ನೀನು ಬಂದು ಮೈಲಿಗೆ ಆಗಿದೆ ಅಂತ ಹೇಳಿ ಕಳಿಸಿದ್ದಾರೆ. ನೀನು ನಮ್ಮ ಮನೆ ಒಳಗೆ ಬರಬಾರದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಜಾತಿ ನಿಂದನೆ ಜೊತೆಗೆ ಹಲ್ಲೆಗೂ ಯತ್ನ ಮಾಡಿದರು ಎಂದು ತೇಜ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಿಳೆ ದೂರು ಆಧರಿಸಿ ನಗರ ಠಾಣೆಯಲ್ಲಿ ಅಸ್ಪೃಶ್ಯತೆ ದೌರ್ಜನ್ಯ ತಡೆ ಕಾಯಿದೆ ಹಾಗೂ ಬಿಎನ್‌ಎಸ್ ಅಡಿ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.