ಗೌರವ ಧನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕತೆಯರ ಧರಣಿ
ಬೆಂಗಳೂರು: ಅಂನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು 15 ಸಾವಿರ ರೂ.ಗೆ ಹೆಚ್ಚಳ, ಗ್ರ್ಯಾಚುಟಿ ನೀಡುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ಸೋಮವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಯಿತು.
ಈ ವೇಳೆ ಮಾತನಾಡಿದ ಎಐಯುಟಿಯುಸಿ ಅಧ್ಯಕ್ಷ ಕೆ.ಸೋಮಶೇಖರ್, ರಾಜ್ಯ ಸರಕಾರ ಫೆ.16ರಂದು ಬಜೆಟ್ ಮಂಡಿಸಲಿದ್ದು, ಸಾರ್ವಜನಿಕರು ಮತ್ತು ನೌಕರರನ್ನು ಒಳಗೊಂಡ ಬಜೆಟ್ ಪೂರ್ವಭಾವಿ ಸಭೆಯನ್ನು ಸರಕಾರ ಏರ್ಪಡಿಸಬೇಕಿತ್ತು. ಆದರೆ ಸರಕಾರ ಯಾವುದೇ ಸಭೆಯನ್ನು ನಡೆಸದೆ ಬಜೆಟ್ ಮಂಡನೆಗೆ ಸಿದ್ಧವಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಎಲ್ಲ ಬೇಡಿಕೆಗಳನ್ನು ಸರಕಾರಕ್ಕೆ ಸಲ್ಲಿಸಿದ್ದು, ಬಜೆಟ್‍ನಲ್ಲಿ ಅವುಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸ್ಕೀಂ ವರ್ಕರ್ಸ್ ಫೆಡರೇಶನ್ ಅಧ್ಯಕ್ಷೆ ರಮಾ.ಟಿ.ಸಿ ಮಾತನಾಡಿ, ಕಾನೂನು ಪ್ರಕಾರ ಹತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರನ್ನು ನೌಕರರೆಂದು ಪರಿಗಣಿಸಿ ಅವರನ್ನು ಖಾಯಂಗೊಳಿಸಬೇಕು. ಗೌರವ ಧನದ ಹೆಸರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೌರ್ಜನ್ಯವಾಗುತ್ತಿದೆ ಎಂದರು.
ಪ್ರಧಾನಿ ಮೋದಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಮಹಿಳಾ ಪರವಾಗಿ ಕೆಲಸ ಮಾಡುವಲ್ಲಿ ಸಂಪೂರ್ಣವಾಗಿ ಸೋತಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್‍ನಲ್ಲಿ ಮಹಿಳೆಯರಿಗೆ ಆದ ಮೋಸವನ್ನು ಗಮನಿಸಬೆಕು ಎಂದು ಅವರು ತಿಳಿಸಿದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೇಲೆ ಎಲ್ಲಾ ಜವಾಬ್ದಾರಿಗಳನ್ನು ಹೇರಲಾಗುತ್ತಿದೆ. ಆದರೆ ಸಂಬಳ ಮಾತ್ರ ಅತ್ಯಂತ ಕಡಿಮೆ. ನ್ಯಾಯಯುತವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ 35 ಸಾವಿರ ರೂ. ವೇತನ ನೀಡಬೇಕು. ಆದರೆ ಈಗ ಕೇಳುತ್ತಿರುವ 15 ಸಾವಿರ ರೂ.ವಾದರೂ ಶೀಘ್ರವಾಗಿ ಹೆಚ್ಚಳ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅಖಿಲ ಭಾರತ ಮಟ್ಟದಲ್ಲಿ ಪ್ರತಿಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ರಮಾ ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಉಮಾದೇವಿ.ಎಂ, ಉಪಾಧ್ಯಕ್ಷೆ ಉಮಾದೇವಿ.ಡಿ, ಭುವನಾ, ರಾಧಾ ರಡ್ಡಿ, ಕಸ್ತೂರಿ ಧಾರವಾಡ, ಲಕ್ಷ್ಮಿ, ಶೋಭಾ ಪಾಟೀಲ್, ನಾಗಮಣಿ ಮತ್ತಿತರರು ಹಾಜರಿದ್ದರು.
ಪ್ರಮುಖ ಬೇಡಿಕೆಗಳು:
• ವೈದ್ಯಕೀಯ ಸಹಾಯಧನ ಹೆಚ್ಚಳ.
• ಸೇವಾ ಹಿರಿತನ ಆಧರಿಸಿ ಮುಂಭಡ್ತಿ .
• ಪ್ರತೀ ತಿಂಗಳು 5ನೆ ತಾರಿಖಿನೊಳಗೆ ಗೌರವಧನ ಪಾವತಿ.
• ವರ್ಷಕ್ಕೆ 2 ಜೊತೆ ಸಮವಸ್ತ್ರ.
• ಮೊಬೈಲ್‍ಗಳಿಗೆ ರೀಚಾರ್ಜ್.
• ಐಸಿಡಿಎಸ್‍ನ ಮೂಲ ಯೋಜನೆಯನ್ನು ಎನ್‍ಇಪಿಯಂತೆ ಬದಲಾಯಿಸುವ ಕ್ರಮವನ್ನು ಕೈಬಿಡಬೇಕು.
• ಮಾತೃಪೂರ್ಣ ಯೋಜನೆ ಫಲಾನುಭವಿಗಳಿಗೆ ಆಹಾರ ಪದಾರ್ಥಗಳನ್ನು ಮನೆಗೆ ನೀಡಲು ಆದೇಶ ನೀಡಬೇಕು.
• ಖಾಲಿ ಇರುವ ಸಹಾಕಿಯರ ಹುದ್ದೆಗಳನ್ನು ಭರ್ತಿಮಾಡಬೇಕು.
• ಮಿನಿ ಅಂಗನವಾಡಿಗಳ ವಿಸ್ತರಣೆ.