ನೇಹಾ ಹತ್ಯೆ ಖಂಡಿಸಿ ನಾಳೆ (ಎ.22) ಧಾರವಾಡ ಬಂದ್‍ಗೆ ಕರೆ ನೀಡಿದ ಅಂಜುಮನ್ ಸಂಸ್ಥೆ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುವತಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಅಂಜುಮನ್ ಇಸ್ಲಾಂ ಸಂಸ್ಥೆ ನೇತೃತ್ವದಲ್ಲಿ ಮುಸ್ಲಿಮರು ಧಾರವಾಡ ನಗರ ವ್ಯಾಪ್ತಿಯಲ್ಲಿ ಸೋಮವಾರ (ಎ.22) ಬೆಳಗ್ಗೆ 10 ಗಂಟೆಯಿಂದ ಸ್ವಯಂ ಪ್ರೇರಿತ ಬಂದ್ ನಡೆಸಲು ಕರೆ ನೀಡಿದ್ದಾರೆ.
ಸೋಮವಾರ ಧಾರವಾಡ ಜಿಲ್ಲೆಯಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‍ಗೆ ಕರೆ ನೀಡಲಾಗಿದ್ದು, ಅದರಂತೆ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೂ ವಾಣಿಜ್ಯ ಮಳಿಗೆ ಬಂದ್ ಆಗಲಿವೆ. ಆನಂತರ, ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಅಂಜುಮನ್ ಸಂಸ್ಥೆ ತಿಳಿಸಿದೆ.
ರವಿವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ವಿದ್ಯಾರ್ಥಿನಿಗೆ ಯಾವುದೇ ಜಾತಿ ಇಲ್ಲ. ನಮ್ಮವರೇ ಒಬ್ಬರಾದ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿರುವುದು ನೋವಾಗಿದೆ. ಇಂತಹ ಘಟನೆಗಳು ಯಾವುದೇ ವಿದ್ಯಾಸಂಸ್ಥೆಗಳಲ್ಲಿ ಆಗಬಾರದು ಎಂದರು.
ಈ ರೀತಿಯ ಘಟನೆಗಳಿಂದ ವಿದ್ಯಾಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಪೋಷಕರು ಹೆದರುತ್ತಾರೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಇಂಥ ಪ್ರಕರಣಗಳಲ್ಲಿ ಶೀಘ್ರ ಶಿಕ್ಷೆಯಾಗಬೇಕು. ಆಗ ಮಾತ್ರ ಘಟನೆಗಳನ್ನು ತಡೆಯಲು ಸಾಧ್ಯ ಎಂದು ಹೇಳಿದರು.
ನಮ್ಮ ಸಂಸ್ಥೆಯಿಂದ ಸಮಗ್ರ ಬಂದ್‍ಗೆ ಕರೆ ನೀಡಲು ಅವಕಾಶ ಇಲ್ಲ. ಹೀಗಾಗಿ ನಮ್ಮ ಸಮುದಾಯದವರಿಗೆ ಮಾತ್ರ ಕರೆ ನೀಡಿದ್ದೇವೆ. ಒತ್ತಾಯ ಪೂರ್ವಕವಾಗಿ ಬಂದ್ ಮಾಡಲು ಹೇಳಿಲ್ಲ. ಸ್ವಯಂಪ್ರೇರಿತ ಬಂದ್ ಮಾಡುತ್ತಿದ್ದೇವೆ. ವಿದ್ಯಾರ್ಥಿನಿಯರ ಸ್ವಯಂ ರಕ್ಷಣೆ ಸಂಬಂಧ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಸಂಸ್ಥೆಯ ಶಾಲಾ-ಕಾಲೇಜುಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರವೇಶದ ಸಮಯದಲ್ಲಿಯೇ ಹುಡುಗರ ಪಾಲಕರ ಕಡೆಯಿಂದ ಪತ್ರ ಬರೆಯಿಸಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಕೊಠಡಿಗೆ ನೇಹಾ ಹೆಸರು: ‘ಅಂಜುಮನ್ ಕಾಲೇಜಿನ ಕೊಠಡಿಗೆ ನೇಹಾಳ ಹೆಸರಿಡಲು ಸಂಸ್ಥೆ ತೀರ್ಮಾನಿಸಿದೆ. ಹತ್ಯೆ ಖಂಡಿಸಿ ಆಕೆಯ ಹೆಸರನ್ನು ಸಂಸ್ಥೆಯ ಒಂದು ಕೊಠಡಿಗೆ ಇಡುತ್ತೇವೆ. ಅವರ ತಂದೆ ತಾಯಿಯಿಂದಲೇ ಉದ್ಘಾಟನೆ ಮಾಡಿಸುತ್ತೇವೆ’ ಎಂದು ಇಸ್ಮಾಯಿಲ್ ತಮಟಗಾರ ತಿಳಿಸಿದರು.