ರಾಜ್ಯ ವಿಧಾನ ಪರಿಷತ್ ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ 11 ಸದಸ್ಯರ ಸದಸ್ಯತ್ವ ಅವಧಿಯು ಜೂ.17ರಂದು ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಆ ಸ್ಥಾನಗಳಿಗೆ ಜೂ.13ರಂದು ಮತದಾನ ನಡೆಸಲು ಕೇಂದ್ರ ಚುನಾವಣಾ ಆಯೋಗವು ಘೋಷಿಸಿದೆ.
11 ಸ್ಥಾನಗಳಲ್ಲಿ ಬಿಜೆಪಿಯ 7, ಕಾಂಗ್ರೆಸ್ ಪಕ್ಷದ 3 ಹಾಗೂ ಜೆಡಿಎಸ್‍ನ ಒಬ್ಬ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಅರವಿಂದ ಕುಮಾರ್ ಅರಳಿ(ಬಿಜೆಪಿ), ಎನ್.ಎಸ್.ಭೋಸರಾಜು (ಕಾಂಗ್ರೆಸ್), ಕೆ. ಗೋವಿಂದರಾಜ್(ಕಾಂಗ್ರೆಸ್), ಡಾ.ತೇಜಸ್ವಿನಿ ಗೌಡ(ಬಿಜೆಪಿ), ಮುನಿರಾಜುಗೌಡ ಪಿ.ಎಂ.(ಬಿಜೆಪಿ), ಕೆ.ಪಿ. ನಂಜುಂಡಿ ವಿಶ್ವಕರ್ಮ(ಬಿಜೆಪಿ), ಬಿ.ಎಂ.ಫಾರೂಕ್(ಜೆಡಿಎಸ್), ರಘುನಾಥ್ ರಾವ್ ಮಲ್ಕಾಪುರೆ(ಬಿಜೆಪಿ), ಎನ್.ರವಿಕುಮಾರ್ (ಬಿಜೆಪಿ), ಎಸ್.ರುದ್ರೇಗೌಡ (ಬಿಜೆಪಿ) ಹಾಗೂ ಕೆ.ಹರೀಶ್ ಕುಮಾರ್(ಕಾಂಗ್ರೆಸ್).
ಚುನಾವಣೆಯ ಅಧಿಸೂಚನೆಯು ಮೇ 27ರಂದು ಹೊರ ಬೀಳಲಿದ್ದು, ಅಂದಿನಿಂದಲೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಜೂ.3ರಂದು ನಾಮಪತ್ರ ಸ್ವೀಕರಿಸಲು ಕೊನೆಯ ದಿನವಾಗಿದೆ. ಜೂ.4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.6ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಜೂ.13ರ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯ ಬಳಿಕ ಮತಗಳ ಏಣಿಕೆ ಕಾರ್ಯ ನಡೆಯಲಿದೆ. ಆನಂತರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.