ಕಲ್ಯಾಣ ಕರ್ನಾಟಕದ ಆಡಳಿತ ಬಲವರ್ಧನೆಗಾಗಿ ‘ಫೆಲೋಶಿಪ್’ ಘೋಷಣೆ
ಬೆಂಗಳೂರು,: ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಸ್ಥಳೀಯ ಆಡಳಿತವನ್ನು ಬಲಪಡಿಸುವ ಸಲುವಾಗಿ ‘ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್’ ಸ್ಥಾಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶನಿವಾರ ಪ್ರಕಟನೆ ಹೊರಡಿಸಿರುವ ಅವರು, ರಾಜ್ಯದ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ 51 ತಾಲ್ಲೂಕುಗಳಲ್ಲಿ ಪ್ರತಿ ತಾಲ್ಲೂಕಿಗೆ ಒಬ್ಬರಂತೆ ‘ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ʼ ಅಡಿಯಲ್ಲಿ ‘ಫೆಲೋ’ಗಳನ್ನು ಎರಡು ವರ್ಷಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ ಎಂದಿದ್ದಾರೆ.
ಸ್ಥಳೀಯ ಆಡಳಿತ ಹಾಗೂ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಈ ಫೆಲೋಶಿಪ್ ಸ್ಥಾಪಿಸಲಾಗಿದ್ದು, ಪಂಚಾಯತ್ ರಾಜ್ ಕ್ಷೇತ್ರದಲ್ಲಿ ನಿರಂತರ ಸಾಮಾಜಿಕ ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸಲು ಸ್ಥಳೀಯ ಆಡಳಿತಕ್ಕೆ ಇವರು ನೆರವಾಗಲಿದ್ದಾರೆ. ಹೊಸ ದೃಷ್ಟಿಕೋನಗಳು, ಆಲೋಚನೆಗಳು ಮತ್ತು ಚಿಂತನೆಗಳ ಮೂಲಕ ಸ್ಥಳೀಯ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವಿದ್ಯಾವಂತ, ತರಬೇತಿ ಪಡೆದ ಮತ್ತು ಪ್ರೇರಿತ ಯುವ ವೃತ್ತಿಪರರ ಕೌಶಲ್ಯತೆಯನ್ನು ಬಳಸಿಕೊಳ್ಳುವುದು ಫೆಲೋಶಿಪ್ ಆರಂಭಿಸಿರುವ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.
ಜಿ.ಪಂ., ತಾ.ಪಂ.ಮತ್ತು ಗ್ರಾಮ ಪಂಚಾಯತಿ ಮಟ್ಟದ ಅಭಿವೃದ್ಧಿ ಚಟುವಟಿಕೆಗಳ ಅನುಷ್ಠಾನದಲ್ಲಿ ತೊಡಗಿಕೊಂಡು, ಸ್ಥಳೀಯ ಅಡಳಿತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಕ್ಷೇತ್ರಮಟ್ಟದ ಸ್ಥಿತಿ-ಗತಿ ಮತ್ತು ಕಲಿಕೆಗಳ ಅಧ್ಯಯನ ಮಾಡುವುದನ್ನು ಪ್ರಮುಖ ಹೊಣೆಯಾಗಿ ಈ ಯುವ ಸಮೂಹ ಹೊರಲಿದ್ದಾರೆ. ಕಾರ್ಯಕ್ರಮದ ಅವಧಿ ಎರಡು ವರ್ಷಗಳಾಗಿದ್ದು, ಆಯ್ಕೆಯದ ʼಫೆಲೊʼಗಳಿಗೆ ಮಾಸಿಕ 60 ಸಾವಿರ ರೂ.ಶಿಷ್ಯವೇತನ ನೀಡಲಾಗುವುದು ಎಂದು ವಿವರಿಸಿದ್ದಾರೆ.
ಫೆಲೋಗಳು ತಮ್ಮ ಚಟುವಟಿಕೆಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯತಿ ಕಾರ್ಯನಿರ್ವಹಣೆ ಶ್ರೇಣೀಕರಣದಲ್ಲಿ ಕೊನೆಯಲ್ಲಿರುವ 10 ಗ್ರಾ.ಪಂ.ಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ತಮ್ಮ ಚಟುವಟಿಕೆಗಳನ್ನು ಕೇಂದ್ರೀಕರಿಸಲಿದ್ದಾರೆ. ಅವಧಿ ಮುಗಿಯುವವರೆಗೆ ನಿಯುಕ್ತಿಗೊಳಿಸಲಾದ ತಾಲೂಕಿನಲ್ಲಿಯೇ ವಾಸ್ತವ್ಯ ಹೂಡಬೇಕಲ್ಲದೆ, ಗ್ರಾಮ ಪಂಚಾಯತಿಗಳಿಗೆ ನಿರಂತರವಾಗಿ ಪ್ರವಾಸ ಕೈಗೊಂಡು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿರುತ್ತದೆ ಎಂಬ ನಿಯಮವನ್ನು ಹಾಕಲಾಗಿದೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.