ಹೈಕಮಾಂಡ್ ಸೂಚನೆ ಮೇರೆಗೆ ಸದಾನಂದ ಗೌಡ ನಿವೃತ್ತಿ ಘೋಷಣೆ: ಬಿ.ಎಸ್. ಯಡಿಯೂರಪ್ಪ
''ಲೋಕಸಭೆ ಚುನಾವಣೆಗೆ ಸ್ಪರ್ಧಿಸದಂತೆ ವರಿಷ್ಠರು ಹೇಳಿದ್ದಾರೆ''
ಬೆಂಗಳೂರು: ಹೈಕಮಾಂಡ್ ಸೂಚನೆಮೇರೆಗೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸಿದ್ದಾರೆ, ಚುನಾವಣಾ ರಾಜಕೀಯ ತೊರೆದು ಪಕ್ಷದ ಚಟುವಟಿಕೆಗಳಲ್ಲಿ ಅವರು ಇನ್ನು ಮುಂದೆ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ಸಿಗಲಾರದೆನ್ನುವ ಕಾರಣಕ್ಕೆ ಅವರು ಚುನಾವಣಾ ರಾಜಕೀಯದಿಂದ ದೂರ ಸರಿಯವ ನಿರ್ಧಾರ ಮಾಡಿದರೇ ೆಂಬ ಪತ್ರಕರ್ತೆರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಅಂತ ನೇರವಾಗಿ ವರಿಷ್ಠರು ಅವರಿಗೆ ಹೇಳಿದ್ದಾರೆ; ಆದರೆ ಪಕ್ಷದ ಬೇರೆಲ್ಲ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.
'ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ರಾಜ್ಯ ಪಕ್ಷದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ' ಎಂದು ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದರೂ ಆಗಿರುವ ಸದಾನಂದ ಗೌಡರು ಬುಧವಾರ ಹಾಸನದಲ್ಲಿ ಹೇಳಿಕೆ ನೀಡಿದ್ದರು.
ಜೆ.ಪಿ. ನಡ್ಡಾ ಭೇಟಿಗೆ ಅವಕಾಶ ಸಿಗದೆ ಬೆಂಗಳೂರಿಗೆ ವಾಪಸ್ ಆಗಿದ್ದ ಸದಾನಂದ ಗೌಡ
ಅಕ್ಟೋಬರ್ 25 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಅವರ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ್ದ ಸದಾನಂದ ಗೌಡ ಅವರಿಗೆ ಮೂರು ದಿನಗಳು ಕಾದರೂ ವರಿಷ್ಠರನ್ನು ಭೇಟಿ ಮಾಡಲು ಸಾಧ್ಯವಾಗದೆ ಬೆಂಗಳೂರಿಗೆ ವಾಪಸ್ಸಾಗಿದ್ದರು. ಅಲ್ಲದೇ, ರಾಜ್ಯದಲ್ಲಿ ಪಕ್ಷದ ನಾಯಕತ್ವದ ಆಯ್ಕೆ ವಿಳಂಬ ಆಗಿರೋದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು.