ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ರಾಜ್ಯಪಾಲರಿಗೆ ಮತ್ತೊಂದು ದೂರು
ಸಿಎಂ ಸಿದ್ದರಾಮಯ್ಯ (PTI)
ಬೆಂಗಳೂರು : ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂಧ ಸಿಎಂ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಕೋರ್ಟ್ ಮೆಟ್ಟಿಲೇರಿದಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಲ್ಲಿ ಬಾಕಿ ಉಳಿದಿರುವ 1,494 ಕೋಟಿ ರೂ.ಹಣ ದುರ್ಬಳಕೆ ಸಂಬಂಧ ರಾಜ್ಯಪಾಲರಿಗೆ ಬಿಜೆಪಿ ಮತ್ತೊಂದು ದೂರು ನೀಡಿದೆ.
ಶುಕ್ರವಾರ ವಿಧಾನ ಪರಿಷತ್ ಬಿಜೆಪಿ ಸದಸ್ಯ ಡಿ.ಎಸ್.ಅರುಣ್ ಅವರು, ‘ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳ 1,494 ಕೋಟಿ ರೂ.ಹಣ ಎಲ್ಲಿದೆ. ರಾಜ್ಯ ಸರಕಾರದ ಖಜಾನೆಯಲ್ಲೂ ಇಲ್ಲ. ಸರಕಾರಕ್ಕೆ ಪತ್ರ ಬರೆದಿದ್ದರೂ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ನೀಡಲಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.
ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅರುಣ್, ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದೇನೆ. 2022-23ರ ಅವಧಿಯಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ಗಳಲ್ಲಿ ಎಷ್ಟು ಹಣ ಬಳಕೆ ಆಗಿದೆ. ಉಳಿದ ಮೊತ್ತ ಯಾವುದಕ್ಕೆ ಉಪಯೋಗ ಮಾಡಿದೆ ಎಂದು ನಾನು ಪ್ರಶ್ನೆ ಮಾಡಿದ್ದೇನೆ.
ಸರಕಾರ ಬಿಡುಗಡೆ ಮಾಡಿದ್ದ ಹಣವನ್ನು ಬಳಕೆ ಮಾಡದೆ ಉಳಿದರೆ ಆ ಹಣ ಸಂಚಿತ ನಿಧಿಗೆ ಹೋಗಬೇಕು. ಹೀಗೆ ಬಿಡುಗಡೆ ಮಾಡಿದ ಹಣ ಬಳಕೆ ಮಾಡಬೇಕಾದರೆ ಶಾಸಕರ ಒಪ್ಪಿಗೆಯನ್ನು ಪಡೆಯಬೇಕು. ಆದರೆ, ಮೇಲ್ಕಂಡ ಹಣ ಬಳಕೆಯ ಬಗ್ಗೆ ಹಾಗೂ ಎಲ್ಲಿದೆ ಎಂಬ ಮಾಹಿತಿ ಇಲ್ಲ ಎಂದು ದೂರಿದರು.