ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; 8 ಬೈಕ್‌ಗಳು ಅಗ್ನಿಗಾಹುತಿ
ಬೆಂಗಳೂರು, ಅ.14: ಇತ್ತೀಚಿಗೆ ನಡೆದ ಅತ್ತಿಬೆಲೆ ಪಟಾಕಿ ಬೆಂಕಿ ದುರಂತ ಮಾಸುವ ಮುನ್ನವೇ ಇಲ್ಲಿನ ಜೋಗುಪಾಳ್ಯದ ಪೈಪ್ ಲೈನ್ ರಸ್ತೆಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಅಗರಬತ್ತಿ ಕಾರ್ಖಾನೆ ಹೊತ್ತಿ ಉರಿದ ಘಟನೆ ಜರುಗಿದೆ.
ಶನಿವಾರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ವಿಕುಮಾರ್ ಎಂಬುವರಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಜತೆಗೆ, 8 ಬೈಕ್, ವಿವಿಧ ವಸ್ತುಗಳು ಅಗ್ನಿಗಾಹುತಿಯಾಗಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಚೋಳರಪಾಳ್ಯದ ಮನೆಗಳಿರುವ ಪ್ರದೇಶದಲ್ಲಿ ಗುಡಿ ಕೈಗಾರಿಕೆ ರೀತಿ ಕಳೆದ ಐದು ವರ್ಷಗಳಿಂದ ಮನೆಯಲ್ಲೇ ಅಗರಬತ್ತಿ ಕಾರ್ಖಾನೆ ನಡೆಲಾಗುತ್ತಿದೆ.ಜತೆಗೆ ಇಲ್ಲಿಯೇ ಅಗರಬತ್ತಿ ತಯಾರಿಕೆಗೆ ಬೇಕಾಗಿದ್ದ ಲಿಕ್ವಿಡ್ ರಾಸಾಯನಿಕಗಳನ್ನು ಶೇಕರಿಸಿಡಲಾಗಿತ್ತು. ಆದರೆ, ಶನಿವಾರ ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿಯಿಂದಾಗಿ ಲಿಕ್ವಿಡ್ ರಾಸಾಯನಿಕಗಳಿದ್ದ ಬಾಟಲಿಗಳು ಸ್ಫೋಟಗೊಂಡು ರಾಸಾಯನಿಕ ರಸ್ತೆಗೆ ಹರಿದಿದೆ.ಇದರ ಪರಿಣಾಮ ರಸ್ತೆಗೂ ಬೆಂಕಿ ಆವರಿಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ಎಂಟು ಬೈಕ್‍ಗಳು ಸುಟ್ಟು ಭಸ್ಮವಾಗಿವೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಮೂರು ವಾಹನಗಳೊಂದಿಗೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಸಂಭವಿಸುತ್ತಿದ್ದ ಹೆಚ್ಚಿನದ ಅನಾಹುತವನ್ನು ತಪ್ಪಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ವಿಜಯನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.