“ಹಿಂದೂ ವಿರೋಧಿ ಸಿಎಂ ಸಿದ್ದರಾಮಯ್ಯರದ್ದು ತುಘಲಕ್ ಸರಕಾರ” ಎಂದು ಟ್ವೀಟ್ ಮಾಡಿದ ಸಿ ಟಿ ರವಿ
“ಈ ರೀತಿಯ ಕೀಳು ಮಟ್ಟದ ರಾಜಕಾರಣ ಯಾರು ಮಾಡಲ್ಲ” ಎಂದ ಜನರು
ಬೆಂಗಳೂರು : ಹಿಂದೂ ವಿರೋಧಿ ಸಿಎಂ ಸಿದ್ದರಾಮಯ್ಯನವರದ್ದು ತುಘಲಕ್ ಸರಕಾರ ಎಂದು ಸಿಟಿ ರವಿ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ x ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ಹಿಂದೂಗಳ ತಾಳ್ಮೆ ದೌರ್ಬಲ್ಯ ಎಂದು ಕೊಂಡಿರುವ ಹಿಂದೂ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತುಘಲಕ್ ಸರ್ಕಾರದ ವಿರುದ್ಧ ಎದ್ದು ನಡೆದಿದೆ ಹಿಂದೂ ಶಕ್ತಿ. ಮಂಡ್ಯದ ಕೆರಗೋಡಿನಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ನಿರ್ಣಯ ಮಾಡಿ ಹಾಕಲಾಗಿದ್ದ ಹನುಮಧ್ವಜವನ್ನು ತೆರವುಗೊಳಿಸಿದ ಕಾಂಗ್ರೆಸ್ ಸರ್ಕಾರದ ಹಿಂದು ವಿರೋಧಿ ನಡೆಗೆ ಖಂಡಿಸಿ ಮಂಡ್ಯದೆಡೆಗೆ ನಡೆದಿದೆ ಹಿಂದು ಶಕ್ತಿ. ಕೆರೆಗೋಡಿನ ಗ್ರಾಮಸ್ಥರ ನೋವಿಗೆ ಧ್ವನಿಯಾಗಿದೆ ಹಿಂದು ಶಕ್ತಿ” ಎಂದು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕೆರೆಗೋಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘಿಸಿ ಧ್ವಜ ಸ್ತಂಭದಲ್ಲಿ ಹಾರಿಸಲಾಗಿದ್ದ ಹನುಮಧ್ವಜವನ್ನು ಪೊಲೀಸ್ ಬಿಗಿಭದ್ರತೆಯಲ್ಲಿ ಇಳಿಸಲಾಗಿತ್ತು. ಹನುಮಧ್ವಜ ತೆರವು ಖಂಡಿಸಿ ಬಿಜೆಪಿ, ಜೆಡಿಎಸ್, ಬಜರಂಗದಳ, ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಸೋಮವಾರ ಕೆರೆಗೋಡು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ 10 ಕಿ.ಮೀ. ಪಾದಯಾತ್ರೆ ನಡೆಸಿದ್ದರು.
ಸಿಟಿ ರವಿ ಪೋಸ್ಟ್ ಗೆ ಸಾಮಾಜಿಕ ಜಾಲತಾಣದಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು, “ನಿಮ್ಮ ಬದುಕನ್ನು ಭಾರತೀಯರಾದ ಬುದ್ಧಿವಂತರು ನೋಡಿದ್ದಾರೆ. ಈ ರೀತಿಯ ಕೀಳು ಮಟ್ಟದ ರಾಜಕಾರಣ ಯಾರು ಮಾಡಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಇನೊಬ್ಬರು, “ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ. ತ್ರಿವರ್ಣ ಧ್ವಜಕ್ಕೆ ಅಗೌರವ ಸಲ್ಲಿಸಿ, ಈಗ ಸಮರ್ಥನೆ ಬೇರೆ ಮಾಡಿಕೊಳ್ಳುತ್ತಿದ್ದೀರಾ?” ಎಂದು ಪ್ರತಿಕ್ರಿಯಿಸಿದ್ದಾರೆ.
“ಇದನ್ನ ಯಾರು ರಾಜಕೀಯ ಶಕ್ತಿ ಅನ್ನುವುದಿಲ್ಲ, ಇದು ನಿಮ್ಮ ಚುನಾವಣೆಯ ಪೂರ್ವ ಮಸಲತ್ತು, ಯಾವ ರಾಜಕೀಯ ನಾಯಕರೂ ಇಲ್ಲ, ಸ್ವಯಂ ಪ್ರೇರಿತವಾಗಿ ಬೇರೆಕಡೆಯಿಂದ ಜನರನ್ನು ತಂದು ಸೇರಿಸಿದ್ದೀರಿ” ಎಂದು ಸಿಟಿ ರವಿ ಪೋಸ್ಟ್ ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯೆಯನ್ನು ನೀಡಿದ್ದಾರೆ.