ರಾಜ್ಯ ಆಡಳಿತ ನ್ಯಾಯ ಮಂಡಳಿಯಿಂದ ಟೈಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ; ಅ.31 ಕೊನೆಯ ದಿನ
ಅರ್ಜಿ ಸಲ್ಲಿಕೆ ಹೇಗೆ?; ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ- ಪಿಟಿಐ
ಬೆಂಗಳೂರು, ಅ.3: ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಿಂದ ಟೈಪಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಉಳಿಕೆ ಮೂಲ ವೃಂದದ ಹುದ್ದೆಗಳು ಇವಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬೆಂಗಳೂರು ಪ್ರಧಾನ ಪೀಠ ಅಥವಾ ಬೆಳಗಾವಿ ಅಥವಾ ಕಲಬುರಗಿ ಪೀಠದಲ್ಲಿ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ ಖಾಲಿ ಇರುವ ಆರು ಟೈಪಿಸ್ಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಎಸೆಸೆಲ್ಸಿ ಪೂರ್ಣಗೊಳಿಸಿರಬೇಕು. ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಯ ಬೆರಳಚ್ಚು ಪರೀಕ್ಷೆಯಲ್ಲಿ ಸೀನಿಯರ್ ಗ್ರೇಡ್ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಕನಿಷ್ಟ 18 ಮತ್ತು ಗರಿಷ್ಠ 35 ವರ್ಷಗಳನ್ನು ಪೂರ್ಣಗೊಳಿಸಿರಬೇಕು. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 21,400 ರೂ.ನಿಂದ 42ಸಾವಿರ ರೂ. ವರೆಗೆ ಮಾಸಿಕ ವೇತನ ನಿಗದಿಸಲಾಗುವುದು. ಅಭ್ಯರ್ಥಿಗಳು ಕೆಸ್ಯಾಟ್ನ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ನಿಗದಿತ ಅರ್ಜಿಗಳನ್ನು ಭರ್ತಿ ಮಾಡಿ ಅವುಗಳನ್ನು ಆಫ್ಲೈನ್ ಮೂಲಕ ಕೆಳಗಿನ ವಿಳಾಸಕ್ಕೆ ಸಲ್ಲಿಕೆ ಮಾಡಬೇಕಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ 150 ರೂ. ಶುಲ್ಕ ನಿಗದಿಸಲಾಗಿದೆ. ಅಭ್ಯರ್ಥಿಗಳು ಪೋಸ್ಟ್ ಆಫೀಸ್ ಅಥವಾ ಡಿಡಿ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆ ವಿಳಾಸ: ವಿಲೇಖನಾಧಿಕಾರಿಗಳು, ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆಜಿ ರಸ್ತೆ, ಬೆಂಗಳೂರು 560009. ಅಭ್ಯರ್ಥಿಗಳು ಮೆರಿಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು. ಅರ್ಜಿ ಸಲ್ಲಿಕೆಗೆ ಅ.31 ಕೊನೆಯ ದಿನವಾಗಿದೆ. ಈ ಹುದ್ದೆ ಕುರಿತಾದ ಸಂಪೂರ್ಣ ಮಾಹಿತಿ ಮತ್ತು ನಿಗದಿತ ಅರ್ಜಿ ನಮೂನೆ ಪಡೆಯಲು ಅಭ್ಯರ್ಥಿಗಳು ಞsಚಿಣ.ಞಚಿಡಿಟಿಚಿಣಚಿಞಚಿ.gov.iಟಿ ಇಲ್ಲಿಗೆ ಭೇಟಿ ನೀಡಬಹುದಾಗಿದೆ.