ಜು.19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು, ಜು.15: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಬಹು ನಿರೀಕ್ಷಿತ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಕೆ ದಿನಾಂಕ ಕೊನೆಗೂ ಪ್ರಕಟವಾಗಿದ್ದು, ಇದೇ ತಿಂಗಳ 19 ರಿಂದ ಮನೆಯ ಯಜಮಾನಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಈಗಾಗಲೇ ತಿಳಿಸಿರುವಂತೆ ಪಡಿತರ ಚೀಟಿಯಲ್ಲಿ 'ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆಯು ಈ ಯೋಜನೆಯ ಫಲಾನುಭವಿಯಾಗಲಿದ್ದಾರೆ. ಒಂದು ವೇಳೆ ಯಜಮಾನಿ ಮಹಿಳೆ ಅಥವಾ ಆಕೆಯ ಪತಿ ಆದಾಯ ತೆರಿಗೆ ಅಥವಾ ಜಿಎಸ್ ಟಿ ಪಾವತಿ ಮಾಡುತ್ತಿದ್ದರೆ, ಅವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದರು.
ಎಸ್ಎಂಎಸ್: ಮೊದಲನೆಯದಾಗಿ ಈಗಾಗಲೇ ರೇಷನ್ ಕಾರ್ಡಿನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಮಹಿಳೆಗೂ ದಿನಾಂಕ, ಸಮಯ ಹಾಗೂ ನೊಂದಾವಣಿ ಮಾಡಿಸುವ ಸ್ಥಳದ ವಿವರಗಳನ್ನು ಎಸ್ಎಂಎಸ್ (SMS) ಬಂದರೆ ಮಾತ್ರ ಅರ್ಜಿ ಸಲ್ಲಿಸಬೇಕಾಗಿದೆ. ಜತೆಗೆ, ಗ್ರಾಮಾಂತರ ಪುದೇಶದಲ್ಲಿ ವಾಸಿಸುವ ಮಹಿಳೆಯರು ಗ್ರಾಮದ ಸಮೀಪವಿರುವ ಗಾಮ-ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಹಾಗೆಯೇ ನಗರ ಪುದೇಶದಲ್ಲಿವವರು ಕರ್ನಾಟಕ ಒನ್ ಬೆಂಗಳೂರು-ಒನ್,ಬಿಬಿಎಂಪಿ ವಾರ್ಡ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ವಿವರಿಸಿದರು.
ಅರ್ಜಿ ಸಲ್ಲಿಸಲು ಸೇವಕರು: ಮಹಿಳೆಯರು ಅರ್ಜಿ ಸಲ್ಲಿಸಲು ಅನುಕೂಲವಾಗಲು "ಪ್ರಜಾ ಪ್ರತಿನಿಧಿ” ಸೇವಕರನ್ನು ನಿಯೋಜಿಸಲಾಗಿದ್ದು (ಸರ್ಕಾರದಿಂದ ಗುರುತಿಸಲ್ಪಟ್ಟ, ಸ್ವಯಂಸೇವಕರು) ಅವರು ಫಲಾನುಭವಿಗಳ ಮನೆಗೆ ಭೇಟಿ ನೀಡಿ ನೊಂದಾಣಿ ಮಾಡುವ ವ್ಯವಸ್ಥೆಯೂ ಮಾಡಲಾಗಿದೆ ಎಂದು ತಿಳಿಸಿದರು.