ವಿರೋಧ ಪಕ್ಷಗಳ ಜೊತೆ ಹೊಂದಾಣಿಕೆಯಿಂದ ವಿಜಯೇಂದ್ರ, ಅಶೋಕ್ ನೇಮಕ: ಅರವಿಂದ ಲಿಂಬಾವಳಿ ಆರೋಪ
ಬಿಜೆಪಿ ವಿರುದ್ಧ ಪಕ್ಷದ ಹಿರಿಯ ನಾಯಕ ಆಕ್ರೋಶ
ಬೆಳಗಾವಿ, ನ.23: ವಿರೋಧ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕರಾಗಿ ಆರ್. ಅಶೋಕ್ ನೇಮಕಗೊಂಡಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ಆರ್.ಅಶೋಕ ಮತ್ತು ಬಿ.ವೈ.ವಿಜಯೇಂದ್ರ ವಿರೋಧ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಹೊಂದಾಣಿಕೆಯಿಂದಲೇ ಅವರು ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನೂ ಗೆಲ್ಲಿಸಬಹುದು. ಹಾಗಾಗಿ ಅವರನ್ನು ನೇಮಕ ಮಾಡಲಾಗಿದೆ’ ಎಂದು ಆರೋಪ ಮಾಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ 66 ಶಾಸಕರಲ್ಲಿ ಕೆಲವರು ಸ್ವಂತ ಶಕ್ತಿ ಮೇಲೆಯೇ ಗೆದ್ದಿದ್ದಾರೆ. ಇನ್ನೂ ಕೆಲವರು ಹೊಂದಾಣಿಕೆ ಮೇಲೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದು ಹೊಂದಾಣಿಕೆ ಮಾಡಿಕೊಳ್ಳುವವರ ಕಾಲ’ ಎಂದು ಲೇವಡಿ ಮಾಡಿದರು.
‘ಬಿ.ವೈ.ವಿಜಯೇಂದ್ರರನ್ನು ಅಳೆದು, ತೂಗಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿಲ್ಲ’ ಎಂದು ಹೇಳುವ ಮೂಲಕ ಅರವಿಂದ ಲಿಂಬಾವಳಿ ತಮ್ಮ ಅಸಮಾಧಾನ ಹೊರಹಾಕಿದರು.