ಬಿಜೆಪಿ ಪದಾಧಿಕಾರಿಗಳ ನೇಮಕ: ಬೇಸರ ವ್ಯಕ್ತಪಡಿಸಿದ ಡಿ.ವಿ.ಸದಾನಂದಗೌಡ
ಬೆಂಗಳೂರು: ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಪಟ್ಟಿಯಲ್ಲಿರುವ ಅನೇಕರ ಕುರಿತು ಬಿಜೆಪಿಯ ಹಲವು ಹಿರಿಯ ನಾಯಕರು ಅಸಮಾಧಾನ ಹೊರಹಾಕಿದ್ದಾರೆ.
ರವಿವಾರ ಈ ಕುರಿತು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸದ ಡಿ.ವಿ.ಸದಾನಂದಗೌಡ, ಸದ್ಯ ಈಗ ನೇಮಕವಾಗಿರುವ ಪದಾಧಿಕಾರಿಗಳ ತಂಡವನ್ನು ಅಸಮರ್ಥರೆಂದು ಹೇಳಲ್ಲ. ಆದರೆ ಸ್ವಲ್ಪ ವ್ಯತ್ಯಾಸಗಳು ಇವೆ. ಇದನ್ನೆಲ್ಲ ಮಾಡುವ ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜೊತೆ ಕುಳಿತು ತಿಳಿದುಕೊಳ್ಳಬೇಕಿತ್ತು ಬೇಸರ ವ್ಯಕ್ತಪಡಿಸಿದರು.
ಹೊಸ ತಂಡ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋದರೆ ಖಂಡಿತ ಯಶಸ್ವಿಯಾಗುತ್ತದೆ. ಮತ್ತೆ ಏನಾದರೂ ಹಳೆಯ ಚಾಳಿ ಮುಂದುವರಿಸಿದರೆ ಅದು ಪಕ್ಷದ ಮೇಲೆ ಸಮಸ್ಯೆ ಆಗುತ್ತದೆ. ಇನ್ನೂ, ರಾಜ್ಯದ ದಕ್ಷಿಣ ಭಾಗಕ್ಕೆ ಹೆಚ್ಚು ಆದ್ಯತೆ ಸಿಕ್ಕಿದೆ, ಉತ್ತರ ಭಾಗಕ್ಕೆ ಸರಿಯಾಗಿ ಸಿಕ್ಕಿಲ್ಲ ಎಂಬ ಮಾತುಗಳು ಇವೆ ಎಂದು ಉಲ್ಲೇಖಿಸಿದರು.
ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ನೇಮಕ ಆಗುವಾಗ ಸಮಾನವಾಗಿ ನೇಮಕ ಆಗಬೇಕು. ಒಂದು ತಂಡ ಅಂದರೆ ಅದು ಒಂದು ಗುಂಪಿಗೆ ಸೀಮಿತ ಆಗಬಾರದು. ಈಗಲಾದರೂ ಕರ್ನಾಟಕಕ್ಕೆ ವರಿಷ್ಠರು ಬರಬೇಕು ಎಂದ ಅವರು, ಹೊಸದಿಲ್ಲಿಯಲ್ಲಿ ಕುಳಿತು ತೀರ್ಮಾನ ಮಾಡುವುದು ಸರಿಯಲ್ಲ. ಕೋರ್ ಕಮಿಟಿ ಎನ್ನುವುದು ಒಂದು ಹಿರಿಯರ ತಂಡ, ಆ ಕೋರ್ ಕಮಿಟಿ ಜೊತೆ ಚರ್ಚಿಸಿ ತೀರ್ಮಾನ ಆಗಿದ್ದರೆ, ಇನ್ನೂ ಸದೃಢವಾದ ತಂಡ ಕಟ್ಟಲು ಸಾಧ್ಯವಾಗಬಹುದಿತ್ತು ಎಂದೂ ಅವರು ಹೇಳಿದರು.
ಮತ್ತೊಂದೆಡೆ ರಾಜ್ಯದಲ್ಲಿ ಸೋಲಿನ ಬಗ್ಗೆ ಇನ್ನೂ ನಾವು ಆತ್ಮಾವಲೋಕನವನ್ನೆ ಮಾಡಿಲ್ಲ. ಮೊದಲು ಈ ಕೆಲಸವನ್ನು ವರಿಷ್ಠರು ಹಿರಿಯ ನಾಯಕರ ಜೊತೆ ಮಾತಾಡಬೇಕಿತ್ತು ಎಂದು ಸದಾನಂದಗೌಡ ತಿಳಿಸಿದರು.