ಕೆಪಿಸಿಸಿ ವಕ್ತಾರ ರಮೇಶ್ ಬಾಬು ಪತ್ರ ಆಧರಿಸಿ ಮಾದಕ ವಸ್ತುಗಳ ತಡೆಗೆ ಎಎಸ್‍ಐ ಸೇರಿ ಇಬ್ಬರು ಪಿಸಿಗಳ ನೇಮಕ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಅಕ್ರಮ ದಂಧೆ ನಡೆಸುವವರನ್ನು ಪತ್ತೆ ಮಾಡಲು ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಆಗಿರುವ ಕುಮಾರ್ ವಿ, ಮತ್ತು ಇಬ್ಬರು ಪಿಸಿಯನ್ನು ನೇಮಿಸಿರುವುದಾಗಿ ಠಾಣೆಯ ಇನ್ಸ್‍ಪೆಕ್ಟರ್ ಅವರು, ಕೆಪಿಸಿಸಿಯ ವಕ್ತಾರ ರಮೇಶ್ ಬಾಬು ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಅಕ್ರಮ ದಂಧೆಯನ್ನು ತಡೆಯಲು ವಿಶೇಷ ಪೊಲೀಸ್ ಆಯುಕ್ತಾಲಯವನ್ನು ಸ್ಥಾಪಿಸುವಂತೆ ಕೆಪಿಸಿಸಿಯ ವಕ್ತಾರ ರಮೇಶ್ ಬಾಬು ಅವರು ದೂರಿನ ಅರ್ಜಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಿಸಿದ್ದರು. 2022ರಲ್ಲಿ ರಾಜ್ಯ ಸಭೆಯ ಅಧಿವೇಶನದಲ್ಲಿ ಮಾದಕ ದ್ರವ್ಯ ವಸ್ತುಗಳ ಅಕ್ರಮ ದಂಧೆ ಬಗ್ಗೆ ನಡೆದ ಚರ್ಚೆಯನ್ನು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ದೂರನ್ನು ಪರಿಗಣಿಸಿ ಠಾಣೆಯ ಇನ್ಸ್ ಪೆಕ್ಟರ್ ಕ್ರಮ ವಹಿಸಿದ್ದಾರೆ.
2023ನೇ ಸಾಲಿಗೆ ಸಂಬಂಧಿಸಿ ಸುಮಾರು 43ಕ್ಕೂ ಅಧಿಕ ಮಾದಕ ದ್ರವ್ಯ ವಸ್ತುಗಳ ಅಕ್ರಮ ದಂಧೆಯ ಕುರಿತು ಜೆ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ನಿಗಧಿತ ಕಾಯ್ದೆಗಳ ಅಡಿಯಲ್ಲಿ ಪೆಡ್ಲರ್ ಗಳ ಹಾಗೂ ಸೇವನೆ ಮಾಡುವವರ ವಿರುದ್ದ ಪ್ರಕರಣಗಳನ್ನು ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೆ ಶಿಕ್ಷಣ ಸಂಸ್ಥೆಗಳಲ್ಲಿ ಮಾದಕ ವಸ್ತುಗಳ ವ್ಯಸನ ತಡೆಗೆ ಕಾನೂನು ಅರಿವು ಮೂಡಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ.