ವನ್ಯಜೀವಿ ಕಾರ್ಯಾಚರಣೆ ಸಿಬ್ಬಂದಿಗೆ ಸೂಕ್ತ ತರಬೇತಿ: ಸಚಿವ ಈಶ್ವರ್ ಖಂಡ್ರೆ
ಬೆಳಗಾವಿ: ಆನೆ ಸೇರಿದಂತೆ ವನ್ಯಮೃಗಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಹೆಚ್ಚಾಗುತ್ತಿದ್ದು, ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವನ್ಯಮೃಗಗಳೂ ಸಾವಿಗೀಡಾಗುತ್ತಿರುವುದು ಆಂತಕದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಪಡೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಕ್ರಮ ಕೈಗೊಳ್ಳುಲು ಸೂಚಿಸಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್, ಬೋಸರಾಜು ಮತ್ತು ಕೆ.ಎನ್.ರಾಜಣ್ಣ ಹಾಗೂ ಮೂರೂ ಜಿಲ್ಲೆಗಳ ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ 9 ಜಿಲ್ಲೆಗಳಿಗೆ ಈಗಾಗಲೇ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ವಾರದಲ್ಲಿ ಕನಿಷ್ಠ 2 ದಿನ ನಿಯೋಜಿತ ಜಿಲ್ಲೆಯಲ್ಲೆ ಉಳಿದು ಪರಿಸ್ಥಿತಿಯನ್ನು ನಿಭಾಯಿಸಲು ಸೂಚನೆ ನೀಡಲಾಗಿದೆ ಎಂದು ಈಶ್ವರ್ ಖಚಿಡ್ರೆ ತಿಳಿಸಿದರು.
ಪ್ರಸಕ್ತ ಸನ್ನಿವೇಶದಲ್ಲಿ ಆನೆ ನಾಡಿಗೆ ಬಾರದಂತೆ ತಡೆಯಲು ನಮ್ಮ ಬಳಿ ಇರುವ ಉತ್ತಮ ಮಾರ್ಗೋಪಾಯ ಎಂದರೆ ರೈಲ್ವೆ ಬ್ಯಾರಿಕೇಡ್ ಆಗಿದೆ. ಆದರೆ ಇದು ಒಂದೆರಡು ವರ್ಷದಲ್ಲಿ ಆಗುವ ಕೆಲಸವಲ್ಲ. ಬಜೆಟ್ ನಲ್ಲಿ 100 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದ್ದು, ಆನೆ ಹಾವಳಿ ಹೆಚ್ಚಾಗಿರುವ ಕಡೆ ರೈಲ್ವೆ ಬ್ಯಾರಿಕೇಡ್ ಹಾಕಲು ಕ್ರಮ ವಹಿಸಲಾಗಿದೆ. ಆನೆಗಳ ಸಮಸ್ಯೆ ಇರುವ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡೋಣ ಎಂದು ಅವರು ಹೇಳಿದರು.
ಕಳೆದ ಎಪ್ರಿಲ್ ನಿಂದೀಚೆಗೆ ರಾಜ್ಯದಲ್ಲಿ ಒಟ್ಟು 43 ಜನರು ಮಾನವ-ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗಿದ್ದು, ಈ ಪೈಕಿ 30 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಚಾಮರಾಜನಗರದಲ್ಲಿ 10, ಕೊಡಗು ಜಿಲ್ಲೆಯಲ್ಲಿ 7, ರಾಮನಗರ 3, ಬೆಂಗಳೂರು ಮತ್ತು ಮೈಸೂರು, ಹಾಸನ ವೃತ್ತದಲ್ಲಿ ತಲಾ 2, ಶಿವಮೊಗ್ಗದಲ್ಲಿ ಒಬ್ಬರು ಆನೆ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ಈಶ್ವರ್ ಖಂಡ್ರೆ ವಿವರಿಸಿದರು.
ಉಳಿದಂತೆ ಕಾಡುಹಂದಿ ದಾಳಿಗೆ ಇಬ್ಬರು, ಮೊಸಳೆಗೆ ಒಬ್ಬರು ಬಲಿಯಾಗಿದ್ದಾರೆ. ಕರಡಿ ದಾಳಿಯಿಂದ ಇಬ್ಬರು ಸಾವಿಗೀಡಾಗಿದ್ದರೆ, ಚಿರತೆ ದಾಳಿಯಿಂದ 3 ಸಾವು ಸಂಭವಿಸಿದೆ. ಹುಲಿ ದಾಳಿಯಿಂದ 4 ಸಾವು ಸಂಭವಿಸಿದ್ದರೆ, ಕೋತಿ ಕಚ್ಚಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಜಾರ್ಜ್ ಸಲಹೆ: ಆನೆಗಳ ಸ್ಥಳಾಂತರ ಕಷ್ಟಸಾಧ್ಯವಾದ ಕೆಲಸ. ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಕಾಡೊಳಗೆ ಆಹಾರ ಸಿಗುತ್ತಿಲ್ಲ ಎಂಬ ದೂರಿದೆ. ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಪುಂಡಾನೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಕೆ.ಜೆ.ಜಾರ್ಜ್ ಸಲಹೆ ನೀಡಿದರು.
ಉಪ ಸಭಾಪತಿ ಪ್ರಾಣೇಶ್, ಶಾಸಕರಾದ ಸಿಮೆಂಟ್ ಮಂಜು, ನಯನ ಮೋಟಮ್ಮ, ರಾಜೇಗೌಡ, ಸುರೇಶ್, ಎಸ್.ಎ.ಬೋಪಣ್ಣ, ಶ್ರೀನಿವಾಸ್, ಮಂಥರ್ ಗೌಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಆನೆಗಳ ಜೊತೆಗೆ ಚಿರತೆ ಹಾವಳಿಯೂ ಹೆಚ್ಚಾಗಿದೆ ಎಂದು ಸಭೆಯ ಗಮನ ಸೆಳೆದರು.