ಆರಗ ಜ್ಞಾನೇಂದ್ರ ಮನುಸ್ಮೃತಿಯ ಪ್ರತಿಪಾದಕ: ರಮೇಶ್ ಬಾಬು ಕಿಡಿ
ಬೆಂಗಳೂರು, ಆ.2: ಎಐಸಿಸಿ ಅಧ್ಯಕ್ಷಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಟೀಕೆ ಮಾಡುವುದರ ಮೂಲಕ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ಮನುಸ್ಮೃತಿಯ ಪ್ರತಿಪಾದಕ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಟೀಕಿಸಿದ್ದಾರೆ.
ಬುಧವಾರ ಈ ಕುರಿತು ಪ್ರತಿಕ್ರಿಯಿಸಿದ ಅವರು, ಆರಗ ಜ್ಞಾನೇಂದ್ರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾಳು, ಮನುಸ್ಮೃತಿಯ ಪ್ರತಿಪಾದಕ. ಹೀಗಾಗಿಯೇ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಟೀಕೆ ಮಾಡುವುದರ ಮೂಲಕ ಅವರ ಮೂಲ ಸಂಘಟನೆಯ ಮನಸ್ಥಿತಿಯನ್ನು ಬಿಚ್ಚಿಟ್ಟು ರಾಷ್ಟ್ರ ರಾಜಕಾರಣದಲ್ಲಿ ಬೆತ್ತಲಾಗಿದ್ದಾರೆ ಎಂದು ಹೇಳಿದರು.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವು ಎ.ಆರ್.ಬದರಿ ನಾರಾಯಣ್, ಶಾಂತವೇರಿ ಗೋಪಾಲಗೌಡ, ಕೊಣಂದೂರು ಲಿಂಗಪ್ಪ, ಡಿ.ಬಿ.ಚಂದ್ರೇಗೌಡ, ಕಿಮ್ಮನೆ ರತ್ನಾಕರ್ ಮುಂತಾದ ಮುತ್ಸದಿ ಹಾಗೂ ಪರಿಪಕ್ವ ಸಂಸದೀಯ ನಾಯಕರನ್ನು ರಾಜ್ಯಕ್ಕೆ ನೀಡಿದ ಅದ್ಭುತವಾದ ನೆಲ. ಇಂತಹ ನೆಲದಲ್ಲಿ ಮನುವಾದದ ಪ್ರತಿಪಾದಕರಾದ ದಲಿತ ವಿರೋಧಿ ಮನಸ್ಥಿತಿಯ ಅರಗ ಜ್ಞಾನೇಂದ್ರ ಶಾಸಕರಾಗಿರುವುದು ರಾಜಕೀಯ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ವರ್ಣಶ್ರೇಣಿಯನ್ನು ಪ್ರತಿಪಾದಿಸುವ ಮೂಲಭೂತವಾದಿಗಳು ದಮನಿತ ವರ್ಗದವರ ಮೈಬಣ್ಣ ಮತ್ತು ಜೀವನ ಪದ್ದತಿಯನ್ನು ಟೀಕಿಸುವ, ಅವಮಾನಿಸುವ ಮನಸ್ಥಿತಿಯಿಂದ ಇನ್ನೂ ಹೊರಬಂದಿಲ್ಲ. ಅದರ ಮುಂದುವರಿದ ಭಾಗವೇ ಆರಗ ಅವರ ಈ ಹೇಳಿಕೆಯಾಗಿದೆ. ಅದರಲ್ಲೂ ಬಿಜೆಪಿಗೆ ಇಂತಹ ನಾಯಕರ ಮೂಲಕ ದೇಶದ ದಮನಿತರನ್ನು ಟೀಕಿಸುವ ಚಾಳಿ ಕರಗತವಾಗಿರುತ್ತದೆ ಎಂದ ಅವರು,
ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಅದಂಪತನಕ್ಕೆ ಕೊಂಡೊಯ್ಯುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಆರಗ ಜ್ಞಾನೇಂದ್ರ ಹೇಳಿಕೆಯು ಖುಷಿಯನ್ನು ನೀಡಬಹುದೇ ಎಂದು ರಮೇಶ್ ಪ್ರಶ್ನೆ ಮಾಡಿದ್ದಾರೆ.