ಅರಸೀಕೆರೆ | ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಶಿಕ್ಷಕನ ವಿರುದ್ಧ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು
ಬೆಂಗಳೂರು, ಸೆ.7: ʼʼಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ರಂಗಾಪುರದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ವಿದ್ಯುತ್ ತಂತಿಯಿಂದ ಮನಸೋಇಚ್ಛೆ ಹಲ್ಲೆ ನಡೆಸಿರುವ ಶಿಕ್ಷಕ ಮಹಾಂತೇಶ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕುʼʼ ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದಲ್ಲಿ ಗುರುವಾರ ದೂರು ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್, ಅಂಜುಮನ್ ಎ ತರಖ್ಖಿ ಉರ್ದು ರಾಜ್ಯಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ಹಾಗೂ ರಾಜ್ಯ ಉರ್ದು ಅಕಾಡೆಮಿಯ ಮಾಜಿ ಅಧ್ಯಕ್ಷ ಮುಬೀನ್ ಮುನವ್ವರ್ ಗುರುವಾರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಈ ಸಂಬಂಧ ದೂರು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳಿಗೆ ವಿದ್ಯುತ್ ತಂತಿನಿಂದ ಹಲ್ಲೆ ನಡೆಸಿದ್ದಲ್ಲದೆ, ಊಟ, ನೀರು ಕೊಡದೆ ಕೊಠಡಿಯಲ್ಲಿ ಕೂಡಿ ಹಾಕಿದ್ದರು. ಈ ಸಂಬಂಧ ಅರಸೀಕೆರೆ ಗ್ರಾಮೀಣ ಠಾಣೆಯಲ್ಲಿ ಸೆ.2ರಂದು ಎಫ್ಐ ಆರ್ ಆಗಿದೆ. ಆದರೆ ಈವರೆಗೆ ಮಹಾಂತೇಶ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ನಿಯೋಗ ತಿಳಿಸಿತು.
ದೂರು ನೀಡಿರುವ ವಿದ್ಯಾರ್ಥಿಗಳ ಮೇಲೆ ದೂರು ಹಿಂಪಡೆಯುವಂತೆ ಒತ್ತಡ ಹೇರಲಾಗುತ್ತಿದೆ. ಮೇಲ್ನೋಟಕ್ಕೆ ಈ ಮಕ್ಕಳಿಗೆ ಪೊಲೀಸರಿಂದ ಹಾಗೂ ಶಾಲೆಯ ಜವಾಬ್ದಾರಿ ಹೊತ್ತಿರುವವರಿಂದ ನ್ಯಾಯ ಸಿಗುವಂತೆ ಕಾಣುತ್ತಿಲ್ಲ ಎಂದು ನಿಯೋಗ ದೂರಿದೆ.
ಆದುದರಿಂದ, ತಾವು ಈ ಸಂಬಂಧ ಮಧ್ಯಪ್ರವೇಶಿಸಿ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಿ, ಮಕ್ಕಳ ಮೇಲೆ ಹಲ್ಲೆ ನಡೆಸುವ ಮೂಲಕ ಕ್ರಿಮಿನಲ್ ಅಪರಾಧ ಎಸಗಿರುವ ಮಹಾಂತೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿ ಎಂದು ನಿಯೋಗ ಮನವಿ ಮಾಡಿದೆ.