ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆಗೆ ವರಿಷ್ಠರಿಗೆ ಅರವಿಂದ ಲಿಂಬಾವಳಿ ಮನವಿ

ವಿಜಯೇಂದ್ರ/ಅರವಿಂದ ಲಿಂಬಾವಳಿ
ಬೆಂಗಳೂರು : ‘ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕೂಡಲೇ ಬದಲಾವಣೆ ಮಾಡಬೇಕು’ ಎಂದು ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ, ಮಾಜಿ ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ದಿಲ್ಲಿಯಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಜೆ.ಪಿ.ನಡ್ಡಾ ಭೇಟಿ ಮಾಡಿದ್ದ ಅರವಿಂದ ಲಿಂಬಾವಳಿ, ‘ರಾಜ್ಯದ ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಹಾಗೂ ರಾಜ್ಯ ಬಿಜೆಪಿಯಲ್ಲಿ ಭಿನ್ನಮತಕ್ಕೆ ಸಂಬಂಧಿಸಿದಂತೆ ಸುದೀರ್ಘ ಸಮಾಲೋಚನೆ ನಡೆಸಿದ್ದರು. ಈ ವೇಳೆ ಬಿಜೆಪಿ ‘ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರರನ್ನು ಬದಲಾವಣೆ ಮಾಡಬೇಕು. ಇಲ್ಲವಾದರೆ, ರಾಜ್ಯಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಅಭ್ಯರ್ಥಿ ಕಣಕ್ಕೆ ಇಳಿಸುವುದು ನಿಶ್ಚಿತ’ ಎಂದು ನಡ್ಡಾ ಗಮನಕ್ಕೆ ತಂದಿದ್ದರು ಎಂದು ಗೊತ್ತಾಗಿದೆ.
ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಗೊಂದಲಗಳು ಮತ್ತು ಅದಕ್ಕೆ ಕಾರಣಗಳ ಬಗ್ಗೆ ಲಿಂಬಾವಳಿ ವರಿಷ್ಠರಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಹೈಕಮಾಂಡ್ ಕೂಡಲೇ ಮಧ್ಯಪ್ರವೇಶ ಮಾಡದಿದ್ದರೆ ಭಿನ್ನಮತ ತೀವ್ರವಾಗಲಿದೆ ಎಂದು ಲಿಂಬಾವಳಿ, ಜೆ.ಪಿ.ನಡ್ಡಾ ಅವರಿಗೆ ಸೂಕ್ಷ್ಮವಾಗಿ ಎಲ್ಲ ವಿವರಗಳನ್ನು ನೀಡಿದ್ದರು ಎಂದು ಹೇಳಲಾಗಿದೆ.
‘ಪಕ್ಷದ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಶಾಸಕರ ಮಾತಿಗೂ ಬೆಲೆ ಕೊಡುತ್ತಿಲ್ಲ. ಅಲ್ಲದೆ, ರಾಜ್ಯ ಸರಕಾರದ ವಿರುದ್ದ ಯಾವುದೇ ಹೋರಾಟ ಕೈಗೆತ್ತಿಕೊಂಡರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತಿಲ್ಲ. ಕಾಂಗ್ರೆಸ್ ಜತೆಗೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಅಲ್ಲದೆ, ಜಿಲ್ಲಾಧ್ಯಕ್ಷರ ನೇಮಕದಲ್ಲೂ ಲೋಪಗಳಾಗಿವೆ’ ಎಂದು ಲಿಂಬಾವಳಿ, ವಿಜಯೇಂದ್ರ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದಾರೆಂದು ಹೇಳಲಾಗಿದೆ.