ಸಂಘರ್ಷ, ಹೊಡೆದಾಟಕ್ಕೆ ಕರೆ ಕೊಟ್ಟಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ: ಎಂ.ಲಕ್ಷ್ಮಣ್ ಒತ್ತಾಯ
ʼʼಚಾಮುಂಡಿ ಚಲೋದಲ್ಲಿ ಭಾಗವಹಿಸಲು 400 RSS ಕಾರ್ಯಕರ್ತರು ಮೈಸೂರಿಗೆ ಬಂದಿದ್ದಾರೆʼʼ
ಮೈಸೂರು: ʼಮಹಿಷ ದಸರಾ ವಿಷಯವಾಗಿ ಜನರ ದಿಕ್ಕು ತಪ್ಪಿಸುತ್ತಿರುವ ಸಂಸದ ಪ್ರತಾಪಸಿಂಹ ದಲಿತ ವಿರೋಧಿ. ಈತ ಸಂರ್ಘ, ಹೊಡೆದಾಟಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಆದರೂ ಪೊಲೀಸರು ಈತನನ್ನು ಏಕೆ ಬಂಧಿಸಿಲ್ಲ, ಪೊಲೀಸರು ಬಿಜೆಪಿ ಮನಸ್ಥಿತಿ ಬಿಟ್ಟು ಕೂಡಲೇ ಬಂಧಿಸಿʼ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼ ದಸರಾಗೆ ಅಡ್ಡಪಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಚಲೋ ಮಾಡುತ್ತಿದ್ದಾರೆ. ಮಹಿಷ ಪೂಜೆ ಮಾಡಬೇಡ ಎನ್ನಲು ಪ್ರತಾಪಸಿಂಹ ಯಾರು?ʼ ಎಂದು ವಾಗ್ದಾಳಿ ನಡೆಸಿದರು.
ʼಯಾರನ್ನಾದರೂ ಸರಿ ಪೂಜಿಸುವ ಅವಕಾಶವನ್ನು ಸಂವಿಧಾನ ಕೊಟ್ಟಿದೆ. ಮಹಿಷಾಸುರ ಸರಿ ಇಲ್ಲದಿದ್ದರೆ ನಿಮ್ಮದೇ ಸರ್ಕಾರ ಇದ್ದಾಗ, ಪ್ರತಿಮೆ ತೆಗೆಸಬೇಕಿತ್ತು. ಮಹಿಷಾಸುರ ಭಯೋತ್ಪಾದಕನೇ?ʼ ಎಂದು ಪ್ರಶ್ನಿಸಿದರು.
ʼಚಾಮುಂಡಿ ಚಲೋದಲ್ಲಿ ಭಾಗವಹಿಸಲು ವಿವಿಧ ರಾಜ್ಯಗಳಿಂದ 400 ಆರೆಸ್ಸೆಸ್ ಕಾರ್ಯಕರ್ತರು ಮೈಸೂರಿಗೆ ಬಂದಿದ್ದಾರೆ. ಕಲ್ಲು ಹೊಡೆಸುವುದು, ಹೆಣ ಉರುಳಿಸಿ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ. ಏನಾದರೂ ಸಮಸ್ಯೆಯಾದರೆ ಜಿಲ್ಲಾಡಳಿತ, ಪೊಲೀಸರು ಹೊಣೆʼ ಎಂದು ಎಚ್ಚರಿಸಿದರು.
ʼಚಾಮುಂಡಿ ಬೆಟ್ಟ ಚಲೋದಲ್ಲಿ ಬಿಜೆಪಿ ಮುಖಂಡರು ಭಾಗವಹಿಸದಂತೆ ಮನವಿ ಮಾಡಿದ ಲಕ್ಷ್ಮಣ್ ಅವರು, ಪೋಷಕರು ತಮ್ಮ ಮಕ್ಕಳನ್ನು ಚಲೋಗೆ ಕಳಹಿಸಬೇಡಿ ಎಂದು ಕೇಳಿದರು. ಸಂಘರ್ಷಕ್ಕೆ ಕರೆ ಕೊಟ್ಟಿರುವ ಪ್ರತಾಪಸಿಂಹ ದಲಿತ ವಿರೋಧಿʼ ಎಂದು ಕಿಡಿಕಾರಿದರು.