ಗೂಂಡಾ ಕಾಯ್ದೆಯಡಿ ಪುನೀತ್ ಕೆರೆಹಳ್ಳಿ ಬಂಧನ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಆ.24: ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು ಸಿಸಿಬಿ ಪೊಲೀಸರು ಗೂಂಡಾ ಕಾಯಿದೆಯಡಿ ಬಂಧಿಸಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು ಪೆÇಲೀಸ್ ಆಯುಕ್ತರು ತನ್ನನ್ನು ವಶಕ್ಕೆ ಪಡೆಯಲು ಮಾಡಿರುವ ಆದೇಶ ಮತ್ತು ಅದನ್ನು ಆಧರಿಸಿ ರಾಜ್ಯ ಸರಕಾರವು ತನ್ನ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯಿದೆಯಡಿ(ಕೋಕಾ- ಕೆಸಿಒಸಿಎ) ಆ.17ರಂದು ಹೊರಡಿಸಿರುವ ಆದೇಶಗಳನ್ನು ವಜಾ ಮಾಡುವಂತೆ ಪುನೀತ್ ಕೆರೆಹಳ್ಳಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಲಯವು ರಾಜ್ಯ ಸರಕಾರ, ನಗರ ಪೆÇಲೀಸ್ ಆಯುಕ್ತರು ಒಳಗೊಂಡು ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಸಮಾಜದ ಸಾಮರಸ್ಯ ಕದಡಿದ ಆರೋಪ, ಸಮಾಜ ವಿರೋಧಿ ಕೃತ್ಯಗಳು, ಅಪರಾಧ ಚಟುವಟಿಕೆಗಳನ್ನು ಆಧರಿಸಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಮೂಲತಃ ಹಾಸನ ಜಿಲ್ಲೆ ಆಲೂರು ತಾಲೂಕಿನ ಕೆರೆಹಳ್ಳಿಯ ಪುನೀತ್, ಬೆಂಗಳೂರಿನ ಜೆ ಪಿ ನಗರ 7ನೆ ಹಂತದಲ್ಲಿ ವಾಸವಾಗಿದ್ದರು. ರಾಷ್ಟ್ರ ರಕ್ಷಣಾ ಪಡೆ ಎಂಬ ಅನಧಿಕೃತ ಸಂಘಟನೆ ಕಟ್ಟಿಕೊಂಡು ಜನರನ್ನು ಬೆದರಿಸುವ, ಸಮಾಜದ ಶಾಂತಿ ಕದಡುವ, ಗೋ ರಕ್ಷಣೆ ಹೆಸರಿನಲ್ಲಿ ವ್ಯಾಪಾರಿಗಳನ್ನು ಬೆದರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.