ಸಿಎಂಗೆ ಶೋಕಾಸ್ ನೋಟಿಸ್ | ರಾಜ್ಯಪಾಲರು ಸಂಪುಟದ ಸಲಹೆ ಆಧರಿಸಿ ಮುಂದುವರೆಯಬೇಕು : ಎ.ಎಸ್.ಪೊನ್ನಣ್ಣ
ಬೆಂಗಳೂರು : ಮುಖ್ಯಮಂತ್ರಿ ಅಥವಾ ಸಚಿವರ ವಿರುದ್ಧ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡುವಂತೆ ಕೋರಿ ಅರ್ಜಿಗಳು ಬಂದಾಗ ರಾಜ್ಯಪಾಲರು ಸಂಪುಟದ ಸಲಹೆಯನ್ನು ಆಧರಿಸಿ ಮುಂದುವರೆಯಬೇಕು. ಈ ಬಗ್ಗೆ ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ತನ್ನ ತೀರ್ಪು ನೀಡಿದೆ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಂಪುಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಗೆ ತಮ್ಮ ವಿವೇಚನಾಧಿಕಾರ ಬಳಸುವ ಅಧಿಕಾರವಿದೆ. ಆದರೆ, ಜು.26ರಂದು ದೂರು ಸ್ವೀಕರಿಸಿ, ಅಂದೇ ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಲು ಅವಕಾಶವಿಲ್ಲ ಎಂದು ಹೇಳಿದರು.
ಅಬ್ರಹಾಂ ನೀಡಿರುವ ದೂರಿನಲ್ಲಿ ಹೊಸ ಕ್ರಿಮಿನಲ್ ಕಾನೂನು, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿವಿಧ ಸೆಕ್ಷನ್‍ಗಳನ್ನು ಉಲ್ಲೇಖ ಮಾಡಿದ್ದಾರೆ. ಆದರೆ, ಅಂತಹ ಯಾವುದೆ ಆರೋಪಗಳು ಈ ಪ್ರಕರಣದಲ್ಲಿ ಕಂಡು ಬರುತ್ತಿಲ್ಲ. ಜು.18ರಂದು ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಅಬ್ರಾಹಂ ಮೊದಲು ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಅಭಿಯೋಜನೆಗೆ ಅವಕಾಶವನ್ನು ತನಿಖಾಧಿಕಾರಿ ಕೇಳಬೇಕೇ ಹೊರತು, ದೂರುದಾರನಲ್ಲ ಎಂದು ಅವರು ಹೇಳಿದರು.
ಕಾನೂನು ಬಾಹಿರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಲೋಕಾಯುಕ್ತ ಪೊಲೀಸರಿಗೆ ಅಬ್ರಹಾಂ ದೂರು ನೀಡಿದ್ದಾರೆ. ಒಂದು ವೇಳೆ ಲೋಕಾಯುಕ್ತ ಪೊಲೀಸರು ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಅವರಿಗೆ ಅನುಮಾನ ಇದ್ದರೆ, ಮ್ಯಾಜಿಸ್ಟ್ರೇಟ್ ಬಳಿ ಹೋಗಿ ದೂರ ನೀಡಬೇಕು. ಆದರೆ, ಇವರು ನೇರವಾಗಿ ರಾಜ್ಯಪಾಲರ ಬಳಿ ಹೋಗಿರುವುದೇ ಕಾನೂನು ಬಾಹಿರ ಎಂದು ಹೇಳಿದರು.
ಹಿಂದೆ ಒಬ್ಬ ಸಿಎಂ ವಿರುದ್ಧದ ಪ್ರಕರಣದಲ್ಲಿಯೂ ಖಾಸಗಿ ದೂರು ದಾಖಲಾದಾಗ ಮ್ಯಾಜಿಸ್ಟ್ರೇಟ್ ಅವರ ಕೋರಿಕೆಯ ಹಿನ್ನೆಲೆಯಲ್ಲಿ ರಾಜ್ಯಪಾಲರು ಅಭಿಯೋಜನೆಗೆ ಅವಕಾಶ ನೀಡಿದ್ದು. ಬಿಜೆಪಿ ನಾಯಕರಾದ ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ವಿರುದ್ಧವು ಅಭಿಯೋಜನೆಗೆ ಅವಕಾಶ ಕೊರಿ ರಾಜ್ಯಪಾಲರಿಗೆ ಹಲವರು ಮನವಿಗಳನ್ನು ಮಾಡಿದ್ದಾರೆ. ಎರಡು ವರ್ಷದಿಂದ ಅನುಮತಿ ಕೊಟ್ಟಿಲ್ಲ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಮುಖ್ಯಮಂತ್ರಿಯ ವಿಚಾರದಲ್ಲಿ ಮಾತ್ರ ಇಷ್ಟೊಂದು ಆತುರದ ನಿರ್ಧಾರ ಯಾಕೆ ಕೈಗೊಂಡಿದ್ದಾರೆ. ಇದು ರಾಜಕೀಯ ಪಿತೂರಿ ಎಂದು ಸಾಮಾನ್ಯ ವ್ಯಕ್ತಿಗೂ ಗೊತ್ತಾಗುತ್ತದೆ ಎಂದು ಅವರು ಹೇಳಿದರು.