ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಹೊತ್ತಲ್ಲೇ ವೈರಲ್ ಆಯ್ತು ಹುಬ್ಬಳ್ಳಿ-ಧಾರವಾಡ ಪೊಲೀಸರ ಟ್ವೀಟ್!
ಹುಬ್ಬಳ್ಳಿ: ಭಾರತೀಯ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಯ ಪ್ರತೀಕ, ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಮೇಲ್ಮೈನಲ್ಲಿ ಇಳಿದಿದೆ. ಈ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ.
ಇದರ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಪೊಲೀಸರ ಟ್ವೀಟ್ ಒಂದು ವೈರಲ್ ಆಗಿದೆ.
ಇಸ್ರೋ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ನ್ನು ಚಂದ್ರನ ಮೇಲೆ ಲ್ಯಾಂಡ್ ಮಾಡಿಸಿದರೆ, ಇತ್ತ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಬೈಕ್ನ ಚಕ್ರವನ್ನು ಮೇಲೆತ್ತಿ ವೀಲಿಂಗ್ ಮಾಡುತ್ತಿದ್ದವನನ್ನು ಹಿಡಿದು ನೆಲಕ್ಕೆ ಲ್ಯಾಂಡ್ ಮಾಡಿಸಿದ ಘಟನೆಯನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ವಿಭಿನ್ನವಾಗಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಟ್ವೀಟ್ ನಲ್ಲೇನಿದೆ?
ʼʼಆವತ್ತು ಎರಡು ಘಟನೆಗಳು ನಡೆದವು..1. 'ನಮ್ಮ ಹೆಮ್ಮೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಲ್ಯಾಂಡ್ ಆಯ್ತು'.. 2. ಬೈಕ್ ನ ಚಕ್ರವನ್ನು ಮೇಲೆತ್ತಿ wheeling ಮಾಡುತ್ತಿದ್ದವನನ್ನು ಹಿಡಿದು ಆತನನ್ನು ನೆಲಕ್ಕೆ ಲ್ಯಾಂಡ್ ಮಾಡಿಸಲಾಯ್ತು..ʼʼ ಎಂದು ವೀಲಿಂಗ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿರುವ ಬಗ್ಗೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ವಿಭಿನ್ನವಾಗಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.