ಅಶೋಕ್ ನಾಮಫಲಕ ತೆಗೆದರೆ ಮಾತ್ರ ವಿಪಕ್ಷ ನಾಯಕನ ಕೊಠಡಿಗೆ ಹೋಗುವೆ: ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್
ಬಿಜೆಪಿಯಲ್ಲಿ ಶಮನವಾಗದ ಭಿನ್ನಮತ
ಬೆಳಗಾವಿ: ‘ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್, ‘ಅಶೋಕ್ ಹೆಸರಿನ ನಾಮಫಲಕ ಇರುವವರೆಗೂ ನಾನು ಆ ಕೊಠಡಿಗೆ ಕಾಲಿಡುವುದಿಲ್ಲ’ ಎಂದು ಹೇಳಿಕೊಳ್ಳುವ ಮೂಲಕ ಅಶೋಕ್ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಹಿನ್ನೆಲೆಯಲ್ಲಿ ಅಧಿವೇಶನ ಕಲಾಪದಲ್ಲಿ ಬಿಜೆಪಿಯ ತೀವ್ರ ಮುಜುಗರಕ್ಕೆ ಸಿಲುಕುತ್ತಿದ್ದು, ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀರ್ಮಾನಗಳನ್ನು ಆ ಪಕ್ಷದ ಸದಸ್ಯರೇ ಪ್ರಶ್ನಿಸುವಂತಾಗಿದೆ. ಹೀಗಾಗಿ ಪಕ್ಷದ ಸದಸ್ಯರ ನಡುವೆ ಸಮನ್ವಯತೆ ಮೂಡಿಸಲು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೊಠಡಿಯಲ್ಲಿ ಸದನ ಆರಂಭಕ್ಕೆ ಮುನ್ನ ಪ್ರತಿನಿತ್ಯ ಶಾಸಕರೊಂದಿಗೆ ಚರ್ಚೆ ನಡೆಸಲಾಗುತ್ತಿದೆ.
ಆ ಹಿನ್ನೆಲೆಯಲ್ಲಿ ಆರ್.ಅಶೋಕ್ ಕೊಠಡಿಯಲ್ಲಿ ನಡೆದ ಪಕ್ಷದ ಶಾಸಕರ ಸಭೆಗೆ ತೆರಳಲು ಎಸ್.ಆರ್.ವಿಶ್ವನಾಥ್ ನಿರಾಕರಿಸಿದ್ದು, ‘ಬೇಕಾದರೆ ಆರ್.ಅಶೋಕ್ ನಾಮಫಲಕ ತೆಗೆಯಲಿ, ಆಗ ಹೋಗುತ್ತೇನೆ’ ಎಂದು ಮಾಧ್ಯಮ ಪ್ರತಿನಿಧಿಗಳ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.