ಬೆಂಗಳೂರಿನಲ್ಲಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸುವ ಮೊಬೈಲ್ ತಯಾರಿಕಾ ಘಟಕ ಆರಂಭ : ಅಶ್ವಿನಿ ವೈಷ್ಣವ್

ಅಶ್ವಿನಿ ವೈಷ್ಣವ್ | PC : x/@BJP4Karnataka
ಬೆಂಗಳೂರು : ಬೆಂಗಳೂರು ನಗರದಲ್ಲಿ 40ರಿಂದ 50 ಸಾವಿರ ಮಂದಿಗೆ ಉದ್ಯೋಗ ಒದಗಿಸುವ ಮೊಬೈಲ್ ತಯಾರಿಕಾ ಘಟಕ ಆರಂಭವಾಗಲಿದೆ. ಮುಂದಿನ ಸಲ ಬಂದಾಗ ನಾನು ಈ ಕಂಪನಿಗೆ ಭೇಟಿ ಕೊಡುತ್ತೇನೆ ಎಂದು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗಾಧಾರಿತ ಕೈಗಾರಿಕೆಗಳಿಗೆ ಒತ್ತು ಕೊಡುವ ಪ್ರಮುಖ ಪ್ರಕಟಣೆಯೂ ಈ ಬಾರಿ ಬಜೆಟ್ನಲ್ಲಿ ಹೊರಬಿದ್ದಿದೆ. ಆಟಿಕೆ, ಆಹಾರ ಸಂಸ್ಕರಣೆ, ಚಪ್ಪಲಿ ಉತ್ಪಾದನೆ ಮೊದಲಾದವುಗಳಿಗೆ ಈ ಬಜೆಟ್ ಆದ್ಯತೆ ಕೊಡಲಿದೆ ಎಂದು ವಿವರಿಸಿದರು.
ತಂತ್ರಜ್ಞಾನಕ್ಕೆ ಗರಿಷ್ಠ ಒತ್ತು ನೀಡಿರುವ ಬಜೆಟ್ ಇದು. ಡೀಪ್ಟೆಕ್ ಸ್ಟಾರ್ಟಪ್ಗಳಿಗೆ ನಿಧಿ ನೀಡುವ ಘೋಷಣೆಯಿಂದ ಬೆಂಗಳೂರು ಹೆಚ್ಚಿನ ಪ್ರಯೋಜನ ಪಡೆಯಲಿದೆ. ವೈಯಕ್ತಿಕ ಆದಾಯ ತೆರಿಗೆ ದರದ ಬದಲಾವಣೆ ಕುರಿತು ಮಧ್ಯಮ ವರ್ಗವು ಬೇಡಿಕೆ ಇಡುತ್ತ ಬಂದಿತ್ತು. 12ಲಕ್ಷ ರೂ.ವಾರ್ಷಿಕ ಆದಾಯಕ್ಕೆ ತೆರಿಗೆ ಇಲ್ಲ ಎಂಬ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.
ಎಂಎಸ್ಎಂಇಗಳ ಸ್ಥಿತಿಯೂ ಸುಧಾರಿಸಿದೆ. ಕೋವಿಡ್ ಅವಧಿಯ ನಡುವೆಯೂ ಉತ್ತಮ ಸಾಲ ವ್ಯವಸ್ಥೆ, ದೊಡ್ಡ ಕೈಗಾರಿಕೆಗಳಿಂದ ಬೆಂಬಲದಿಂದ ಎಂಎಸ್ಎಂಇಗಳೂ ಉತ್ತಮ ಸ್ಥಿತಿಯಲ್ಲಿವೆ. ಬೆಲೆ ಏರಿಕೆ ನಿಯಂತ್ರಣದಲ್ಲಿದೆ. ನಾವು ಭವಿಷ್ಯದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿ ಇಟ್ಟುಕೊಂಡು ಶೇ.6ರಿಂದ 8ರಷ್ಟು ಬೆಳವಣಿಗೆ ದರವನ್ನು ಕಾಪಾಡುವ ಸ್ಥಿತಿಯಲ್ಲಿದ್ದೇವೆ ಎಂದು ಅವರು ವಿಶ್ಲೇಷಿಸಿದರು.
ಕಡಿಮೆ ಆದಾಯ, ಮಧ್ಯಮ ಆದಾಯದ ಕುಟುಂಬಗಳಿಗೆ ಆದ್ಯತೆ ನೀಡುವ ಕೆಲಸವನ್ನು ಪ್ರಧಾನಿ ಮತ್ತು ಕೇಂದ್ರ ಹಣಕಾಸು ಸಚಿವರು ಮಾಡಿದ್ದಾರೆ. 12ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ ಎಂಬುದು ವೇತನದಾರರಿಗೆ ದೊಡ್ಡ ಕೊಡುಗೆ. 10 ವರ್ಷಗಳ ಹಿಂದೆ ಸುಮಾರು 2.5ಲಕ್ಷ ಕೋಟಿ ರೂ.ಬಂಡವಾಳ ಹೂಡಿಕೆ ಇದ್ದರೆ, ಅದು ಈಗ 15 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ವಿವರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.