5, 8 ಮತ್ತು 9ನೇ ತರಗತಿಗಳಿಗೆ ಮಾ.25ರಿಂದ ‘ಮೌಲ್ಯಾಂಕನ ಪರೀಕ್ಷೆ’
ಬೆಂಗಳೂರು: ಹೈಕೋರ್ಟ್ ತೀರ್ಪು ಹೊರ ಬಂದ ಬೆನ್ನಲ್ಲೇ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸ್ಥಗಿತಗೊಂಡಿದ್ದ ಮೌಲ್ಯಾಂಕನ ಪರೀಕ್ಷೆಯನ್ನು ನಡೆಸಲು ಸರಕಾರ ಮುಂದಾಗಿದೆ. ಮಾ.25ರಿಂದ ಪರೀಕ್ಷೆಗಳು ಮುಂದುವರೆಯಲಿದ್ದು, ಪರಿಷ್ಕೃತ ವೇಳಾಪಟ್ಟಿ ಪ್ರಕಟವಾಗಿದೆ. ಈ ಹಿಂದೆ ಪ್ರಥಮ ಭಾಷೆ, ದ್ವಿತೀಯ ಭಾಷೆ ಪರೀಕ್ಷೆಗಳು ನಡೆದಿವೆ.
ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗಳೂ ಮಾ.25ರಿಂದ ಆರಂಭವಾಗುತ್ತಿದ್ದು, ಸಮಯ ಹೊಂದಾಣಿಕೆ ಮಾಡಿಕೊಂಡು ಪರೀಕ್ಷೆ ನಡೆಸಲಾಗುತ್ತಿದೆ. 5ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮಾ.25ರಂದು ಮಧ್ಯಾಹ್ನ 2.30ರಿಂದ 4.30ರ ವರೆಗೆ ಪರಿಸರ ಅಧ್ಯಯನ ವಿಷಯದ ಪರೀಕ್ಷೆ, ಮಾ.26ರ ಬೆಳಗ್ಗೆ 10 ರಿಂದ ಮಧ್ಯಾಹ್ನ 12ರ ವರೆಗೆ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ.
8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮಾ.25ರಂದು ಮಧ್ಯಾಹ್ನ 2.30ರಿಂದ 5 ರವರೆಗೆ ತೃತೀಯ ಭಾಷೆ, ಮಾ.26ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರವರೆಗೆ ಗಣಿತ, ಮಾ.27ರಂದು ಮಧ್ಯಾಹ್ನ 2.30ರಿಂದ 5 ರವರೆಗೆ ವಿಜ್ಞಾನ, ಮಾ.28ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರವರೆಗೆ ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮಾ.25ರಂದು ಮಧ್ಯಾಹ್ನ 2ರಿಂದ 5 ರವರೆಗೆ ತೃತೀಯ ಭಾಷೆ, ಮಾ.26ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1.15ರ ವರೆಗೆ ಗಣಿತ, ಮಾ.27ರಂದು ಮಧ್ಯಾಹ್ನ 2 ರಿಂದ 5.15ರ ವರೆಗೆ ವಿಜ್ಞಾನ, ಮಾ.28ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರ ವರೆಗೆ ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
ರಾಜ್ಯ ಪಠ್ಯಕ್ರಮದ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ-2 ಮೌಲ್ಯಾಂಕನ ಪರೀಕ್ಷೆಯನ್ನು ನಡೆಸಲು ಸರಕಾರ ಮುಂದಾಗಿತ್ತು. ಅದರಂತೆ ಈ ಮೂರೂ ತರಗತಿಯ ವಿದ್ಯಾರ್ಥಿಗಳಿಗೆ ಎರಡು ಪರೀಕ್ಷೆಗಳನ್ನು ನಡೆಸಲಾಗಿತ್ತು. ಆದರೆ ಕೆಲ ಸಂಘಟನೆಗಳು ಕೋರ್ಟ್ ಮೊರೆ ಹೋದ ಕಾರಣ ಪರೀಕ್ಷೆಗಳನ್ನು ಮೂಂದೂಡಲಾಗಿತ್ತು. ಈಗ ಹೈಕೋರ್ಟ್ ಪರೀಕ್ಷೆಗಳನ್ನು ಮುಂದುವರೆಸುವಂತೆ ತೀರ್ಪು ನೀಡಿದೆ.