ಅಲೆಮಾರಿ ಸಮುದಾಯಗಳಿಗೆ 2 ಲಕ್ಷ ರೂ.ವರೆಗೆ ನೆರವು: ಸಚಿವ ಡಾ. ಮಹದೇವಪ್ಪ
ಸಚಿವ ಡಾ.ಎಚ್.ಸಿ.ಮಹದೇವಪ್ಪ
ಬೆಂಗಳೂರು: ರಾಜ್ಯದಲ್ಲಿನ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದವರಿಗೆ 2ಲಕ್ಷ ರೂ.ಗಳ ವರೆಗೆ ಉದ್ಯಮಶೀಲತಾ ಸಾಲ ಸೌಲಭ್ಯವನ್ನು ರಾಜ್ಯ ಸರಕಾರ ಕಲ್ಪಿಸಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, "ಅಲೆಮಾರಿ ಸಮುದಾಯಗಳು ತಮ್ಮ ಬದುಕಿನಲ್ಲಿ ನಿರೀಕ್ಷಿತ ಸುಧಾರಣೆ ಕಾಣದೆ ಒಂದಿಲ್ಲ ಒಂದು ಕಾರಣಕ್ಕೆ ಅಭದ್ರತೆ ಮತ್ತು ಅನಿಶ್ಚಿತತೆ ಎದುರಿಸುತ್ತಿವೆ. ಅವರಿಗೆ ಗೌರವಾನ್ವಿತ ಬದುಕು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮೇಲ್ಕಂಡ ಕ್ರಮಗಳನ್ನು ಕೈಗೊಂಡಿದೆ" ಎಂದು ಹೇಳಿದ್ದಾರೆ.
"ಅಭದ್ರತೆ ಬದಕನ್ನು ಎದುರಿಸುತ್ತಿರುವ ಈ ವರ್ಗದ ಜನತೆಯ ಅನುಕೂಲಕ್ಕಾಗಿ ಸರಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಬುಡಕಟ್ಟು ಜನಾಂಗದವರು ಸರಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು" ಎಂದು ಮಹದೇವಪ್ಪ ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.
"ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ ಮಕ್ಕಳ ಜ್ಞಾನಾರ್ಜನೆಗೆ ಪೂರಕವಾಗಿ ಇಂಟರ್ ನೆಟ್ ಸೌಲಭ್ಯವನ್ನು ನೀಡಲು ಸರಕಾರ ಕ್ರಮ ಕೈಗೊಂಡಿದೆ. ಕ್ರೈಸ್ ಸಂಸ್ಥೆಯ ಮೂಲಕ ಈ ಸೌಲಭ್ಯವನ್ನು ವಸತಿ ಶಿಕ್ಷಣ ಸಂಸ್ಥೆಗಳ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತಿದೆ" ಎಂದು ಡಾ.ಮಹದೇವಪ್ಪ ಮಾಹಿತಿ ನೀಡಿದ್ದಾರೆ.
ಆಧುನಿಕ ಸಂದರ್ಭವು ಬೆಳೆದಂತೆ, ತಮ್ಮ ಬದುಕಲ್ಲಿ ನಿರೀಕ್ಷಿತ ಸುಧಾರಣೆ ಕಾಣದ ಅಲೆಮಾರಿ ಸಮುದಾಯಗಳು ಒಂದಿಲ್ಲೊಂದು ಕಾರಣಕ್ಕೆ ಅಭದ್ರತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತವೆ
— Dr H.C.Mahadevappa (@CMahadevappa) January 4, 2024
ಅವರಿಗೆ ಘನತೆಯ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಅಲೆಮಾರಿಗಳಿಗೆ 2 ಲಕ್ಷದವರೆಗೆ ಉದ್ಯಮಶೀಲತಾ ಸಾಲವನ್ನು ನಮ್ಮ ಸರ್ಕಾರ ಕಲ್ಪಿಸಲಿದೆ pic.twitter.com/gPCfkkrnPO