ಬೆಂಗಳೂರಿನ 500ಕ್ಕೂ ಹೆಚ್ಚು ಪಬ್, ಹುಕ್ಕಾ ಬಾರ್ ಗಳ ಮೇಲೆ ದಾಳಿ: ಅಪ್ರಾಪ್ತರನ್ನು ವಶಕ್ಕೆ ಪಡೆದ ಸಿಸಿಬಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.9: ರಾಜಧಾನಿ ಬೆಂಗಳೂರಿನ ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಹುಕ್ಕಾ ಬಾರ್ ಗಳ ಮೇಲೆ ಸಿಸಿಬಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಸೆ.8ರ ಸಂಜೆಯಿಂದ ತಡರಾತ್ರಿಯ ವರೆಗೆ ನಗರದ ಕೋರಮಂಗಲ, ಇಂದಿರಾನಗರ, ಎಚ್ಎಸ್ಆರ್ ಲೇಔಟ್, ಬಾಣಸವಾಡಿ, ಹೆಣ್ಣೂರು ಸೇರಿದಂತೆ ನಗರದ ಒಟ್ಟು 500ಕ್ಕೂ ಹೆಚ್ಚು ಕಡೆ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಸುಮಾರು ಕಡೆಗಳಲ್ಲಿ ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಅಬಕಾರಿ ನಿಯಮಗಳನ್ನು ಉಲ್ಲಂಘಿಸುವ ಮೂಲಕ ಅಪ್ರಾಪ್ತ ವಯಸ್ಸಿನವರಿಗೆ ಧೂಮಪಾನಕ್ಕೆ ಅವಕಾಶ, ಮದ್ಯ ಸರಬರಾಜು ಮಾಡುತ್ತಿರುವುದು ಕಂಡು ಬಂದಿದೆ.
ಅಪ್ರಾಪ್ತರು ನಕಲಿ ಆಧಾರ್ ಕಾರ್ಡ್ ಬಳಕೆ ಮಾಡಿಕೊಂಡು ಪಬ್ಗೆ ಹೋಗಿರುವುದು ಪತ್ತೆಯಾಗಿದೆ. ಡಿಜಿಟಲ್ ನಕಲಿ ಆಧಾರ್ ಕಾರ್ಡ್ಗಳನ್ನು ಪತ್ತೆ ಮಾಡಲಾಗಿದೆ. ಇನ್ನು ಅಪ್ರಾಪ್ತರು ಡ್ರಗ್ಸ್ ಸೇವನೆ ಮಾಡಿರುವುದು ಸಹ ಪತ್ತೆಯಾಗಿದೆ. ಇದೇ ಸಂದರ್ಭದಲ್ಲಿ ಪಬ್ ಒಂದರಲ್ಲಿ ಪತ್ತೆಯಾದ ಅಪ್ರಾಪ್ತರು ನಾವು ಶಾಸಕರ ಕಡೆಯವರು, ಕಿರುತೆರೆ ಕಲಾವಿದರು ಎಂದು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದು, ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ನಗರದ ಕೆಲವೆಡೆ ಕಾಲೇಜು ವಿದ್ಯಾರ್ಥಿಗಳು ಪಬ್, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಹುಕ್ಕಾ ಬಾರ್ಗಳತ್ತ ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ಕೆಲ ಕಾಲೇಜು ಮುಖ್ಯಸ್ಥರು ದೂರು ನೀಡಿದ್ದರು. ದೂರನ್ನು ಪರಿಗಣಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದಿದ್ದಾರೆ.