ಪತ್ರಕರ್ತರ ಮೇಲಿನ ದಾಳಿ ಪ್ರಜಾಪ್ರಭುತ್ವದ ಕಗ್ಗೊಲೆ: ʼಜಾಗೃತ ನಾಗರಿಕರುʼ ಸಂಘಟನೆ ಖಂಡನೆ
ದಾಳಿಗೊಳಗಾದ ಪತ್ರಕರ್ತರು (Photo:PTI)
ಬೆಂಗಳೂರು: ದಿಲ್ಲಿಯಲ್ಲಿ ಹಲವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮನೆಗಳಿಗೆ ಪೊಲೀಸರು ದಾಳಿ ನಡೆಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ ಮಂಗಳವಾರ ಖಂಡನೆ ವ್ಯಕ್ತಪಡಿಸಿದೆ.
ಈ ಕುರಿತ ಹೇಳಿಕೆಗೆ ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಿಜಯಾ, ಡಾ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, .ಶ್ರೀಪಾದ ಭಟ್, ವಿಮಲಾ.ಕೆ.ಎಸ್., ಡಾ.ಮೀನಾಕ್ಷಿ ಬಾಳಿ, ಡಾ.ಎನ್.ಗಾಯತ್ರಿ, ಟಿ.ಸುರೇಂದ್ರ ರಾವ್, ಡಾ.ವಸುಂಧರಾ ಭೂಪತಿ, ಎನ್.ಕೆ.ವಸಂತ ರಾಜ್ ಸಹಿ ಮಾಡಿದ್ದಾರೆ.
ʼದಿಲ್ಲಿಯ ಹಲವು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರ ಮನೆಗಳಿಗೆ ಪೊಲೀಸರು ನುಗ್ಗಿ ಅವರ ಲ್ಯಾಪ್ ಟಾಪ್, ಮೊಬೈಲ್, ಹಾರ್ಡ್ಡಿಸ್ಕ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೆ ಸಾಮಾಜಿಕ ಹೋರಾಟಗಾರು, ಪತ್ರಕರ್ತರನ್ನು ವಶಕ್ಕೆ ಪಡೆಯಲಾಗಿದೆ. ಸ್ವತಂತ್ರ ಸುದ್ದಿವಾಹಿನಿಯಾದ ನ್ಯೂಸ್ ಕ್ಲಿಕ್ ವಿರುದ್ಧ ಯುಪಿಎ ಅಡಿಯಲ್ಲಿ ಹೊಸ ಪ್ರಕರಣವನ್ನು ದಾಖಲಿಸಲಾಗಿದ್ದು, ಸಂಘಟನೆ ಅಸಮಾಧಾನ ಹೊರಹಾಕಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಕೆಲಸ ಮಾಡುವವರನ್ನು, ಕ್ರೂರವಾಗಿ ಭೇಟೆಯಾಡುವುದನ್ನು ಈ ಕೂಡಲೇ ನಿಲ್ಲಿಸಬೇಕುʼ ಎಂದು ಜಾಗೃತ ನಾಗರಿಕರು ಕರ್ನಾಟಕ ಸಂಘಟನೆ ಒತ್ತಾಯಿಸಿದೆ.