ಕೇರಳದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ; ಕೊಡಗಿನ ಇಬ್ಬರು ಸೇರಿ 6 ಮಂದಿ ಆರೋಪಿಗಳ ಬಂಧನ
ಚಿತ್ರ- ಬಂಧಿತ ಆರೋಪಿಗಳು ಮತ್ತು ಪೊಲೀಸರು ವಶಕ್ಕೆ ಪಡೆದಿರುವ ಆನೆ ದಂತ
ಮಡಿಕೇರಿ ನ.4 : ಕೇರಳದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಕೊಡಗು ಜಿಲ್ಲೆಯ ಇಬ್ಬರು ಸೇರಿದಂತೆ ಒಟ್ಟು 6 ಮಂದಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 5.5ಕೆ.ಜಿ ತೂಕದ ಅಂದಾಜು 1.5 ಕೋಟಿ ರೂ. ಬೆಲೆ ಬಾಳುವ 1 ಆನೆ ದಂತವನ್ನು ವಶಕ್ಕೆ ಪಡೆದಿರುವುದು ವರದಿಯಾಗಿದೆ.
ಕೇರಳದ ಮಾನಂದವಾಡಿಯ ಲಾಡ್ಜ್ ಒಂದರಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾನಂದವಾಡಿ ಅರಣ್ಯ ಇಲಾಖೆ ಗುಪ್ತಚರ ವಿಭಾಗ ಮತ್ತು ಅಲ್ಲಿನ ಪೊಲೀಸರಿಗೆ ಮಾಹಿತಿ ಲಭಿಸಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಗುಪ್ತಚರ ವಿಭಾಗ ಮತ್ತು ಪೊಲೀಸ್ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಗೋಣಿಕೊಪ್ಪಲು ನಿವಾಸಿ ರಾಜು(52), ಪೊನ್ನಂಪೇಟೆಯ ಪಿಲಿಪ್ ಮ್ಯಾಥ್ಯು(68) ಕರ್ನಾಟಕದ ಶೆಟ್ಟಿಗಿರಿಯ ಗೆಪ್(60), ವಯನಾಡಿನ ವಕೇರಿಯ ಸುಧೀಶ್(36), ಜಸ್ಟಿನ್ ಜೋಸೆಫ್(24) ಹಾಗೂ ಯೆಲ್ಡೋ(30) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಿಂದ ದಂತ ತೆಗೆದುಕೊಂಡು ಹೋಗಿ ಕೇರಳದಲ್ಲಿ ಮಾರಾಟಕ್ಕೆ ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಕೇರಳ ಪೊಲೀಸರು, ಸರ್ಚ್ ವಾರೆಂಟ್ ಪಡೆದುಕೊಂಡು ಗೋಣಿಕೊಪ್ಪಲು ಪಟ್ಟಣದಲ್ಲಿಯೂ ಶೋಧ ಕಾರ್ಯ ನಡೆಸಿದ್ದಾರೆ.
ಮಡಿಕೇರಿ ಫಾರೆಸ್ಟ್ ಸ್ಕ್ವಾಡ್ನ ಎಸಿಎಫ್ ಶ್ರೀನಿವಾಸ್ ನಾಯಕ್ ನೇತೃತ್ವದಲ್ಲಿ ಆರ್ಎಫ್ಓಗಳಾದ ಶಮಾ, ಚಂದು, ವಿಕ್ರಂ, ನಾಗಮಣಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಗೋಣಿಕೊಪ್ಪ ಮತ್ತು ಪೊನ್ನಂಪೇಟೆಯ ವಿವಿಧ ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.