ಬಿಜೆಪಿಯವರು ತೆಪ್ಪಗಿದ್ದರೆ ಒಳ್ಳೆಯದು, ಆಪರೇಷನ್ ಕಮಲಕ್ಕೆ ಸಂಬಂಧಪಟ್ಟಂತೆ ನನ್ನ ಬಳಿ ಸಾಕ್ಷಿ ಇದೆ: ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ
"ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬೀಳಿಸಲು ಸಾಧ್ಯವಿಲ್ಲ"
ರವಿಕುಮಾರ್ ಗಣಿಗ
ಬೆಂಗಳೂರು: ಬಿಜೆಪಿಯವರು ತೆಪ್ಪಗಿದ್ದರೆ ಒಳ್ಳೆಯದು. ಆಪರೇಷನ್ ಕಮಲಕ್ಕೆ ಸಂಬಂಧಪಟ್ಟಂತೆ ನನ್ನ ಬಳಿ ಸಾಕ್ಷಿ ಇದೆ. ಬಿಜೆಪಿ ಬ್ರೋಕರ್ ಗಳು ಬನ್ನಿ ಬನ್ನಿ ಎಂದು ಬೆನ್ನು ಬಿದ್ದಿದ್ದಾರೆ ಎಂದು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ರವಿಕುಮಾರ್ ಗಣಿಗ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಇಲ್ಲಿನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಹಾಗೂ ಎಲ್ಲ ಮಾಹಿತಿಗಳನ್ನು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ನೀಡುತ್ತೇನೆ. ಇದೀಗ ಬಿಜೆಪಿಯವರು ಸತ್ಯವಂತರ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ಬ್ರೋಕರ್ ಗಳಿದ್ದಾರೆ. ಅವರೇ ಕಾಂಗ್ರೆಸ್ ಸರಕಾರ ಬೀಳಿಸಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಊರಿಗೆ ಬಂದವರು ನೀರಿಗೆ ಬರಲ್ವಾ? ಇವರ ದಾಖಲೆ ಹೊರಗೆ ಬಂದೇ ಬರುತ್ತದೆ. ನನಗೆ ವಿಧಾನಸಭೆ ಮೊಗಸಾಲೆಯಲ್ಲಿ ಬಿಜೆಪಿ ಸ್ನೇಹಿತರು ಹೇಳಿದ್ದು, ಹಣ ಸ್ವಲ್ವ ಜಾಸ್ತಿ ಆಯಿತಲ್ಲ ಎಂದು ಹೇಳಿದ್ದರು. ಬಿಜೆಪಿಯವರು ಎರಡೂ ಅವಧಿಯಲ್ಲಿ ಸರಕಾರ ರಚನೆ ಮಾಡಿದ್ದೇ ಆಪರೇಷನ್ ಕಮಲದ ಮೂಲಕವೇ ಎಂದು ರವಿಕುಮಾರ್ ಗಣಿಗ ಟೀಕಿಸಿದರು.
ಈ ಹಿಂದೆ ಶಾಸಕ ಶ್ರೀನಿವಾಸ್ ಗೌಡ ಆರೋಪ ಮಾಡಿದ್ದರು. ಡಾ.ಅಶ್ವತ್ಥ್ ನಾರಾಯಣ್ ಹಾಗೂ ಸಿ.ಪಿ. ಯೋಗೇಶ್ವರ್ 5 ಕೋಟಿ ರೂ.ಗಳನ್ನು ನನ್ನ ಮನೆಗೆ ತಂದಿಟ್ಟು ಹೋಗಿದ್ದರು ಎಂದಿದ್ದರು. ಅದನ್ನು ತನಿಖೆ ಮಾಡಿ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಜೀವ್ ಏಕೆ ಕೇಳುವುದಿಲ್ಲ. ಸಿಎಂ ಖುರ್ಚಿ 2 ಸಾವಿರ ಕೋಟಿ ರೂ. ಹರಾಜಿಗೆ ಇದೆ ಎಂದು ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಜನರಿಂದ ಆಯ್ಕೆಯಾದ ಸರಕಾರವನ್ನು ಬೀಳಿಸಲು ಹುನ್ನಾರ ನಡೆಸಿದ್ದು, ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬೀಳಿಸಲು ಸಾಧ್ಯವಿಲ್ಲ. ನಾನು ಹೆಸರು ಹೇಳಿದ ಮೇಲೆ ಬಿಜೆಪಿ ನಾಯಕರು ಸುಮ್ಮನಾಗಿದ್ದಾರೆ. ಬಿಜೆಪಿಯಲ್ಲಿ ಬ್ರೋಕರ್ ಗಳು ಇದ್ದಾರೆ ಎಂದು ಅವರು ಲೇವಡಿ ಮಾಡಿದರು.